ನವದೆಹಲಿ, ಜೂ 03 (DaijiworldNews/PY) : ಕುಟುಂಬದ ಸದಸ್ಯರು ತಮ್ಮ ವಿವಾಹಕ್ಕೆ ವಿರೋಧಿಸಿದ ಹಿನ್ನೆಲೆ ನಮಗೆ ರಕ್ಷಣೆ ನೀಡಬೇಕೆಂದು ಕೋರಿ ಕೋರ್ಟ್ ಮೆಟ್ಟಿಲೇರಿದ್ದ ವಧು-ವರನಿಗೆ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ.
ತಮ್ಮ ವಿವಾಹಕ್ಕೆ ಕುಟುಂಬಸ್ಥರ ವಿರೋಧವಿದ್ದು, ನಮಗೆ ರಕ್ಷಣೆ ನೀಡಬೇಕೆಂದು ಕೋರಿ ಕೋರ್ಟ್ ಮೆಟ್ಟಿಲೇರಿದ್ದ ವೇಳೆ ವಿವಾಹದ ಫೋಟೋವನ್ನು ಗಮನಿಸಿದ ನ್ಯಾಯಾಧೀಶರು ಇಬ್ಬರೂ ಕೂಡಾ ಮಾಸ್ಕ್ ಧರಿಸಿಲ್ಲ ಎಂಬುವುದನ್ನು ಪತ್ತೆಹಚ್ಚಿದ್ದರು.
ದೂರಿನ ಪ್ರಕಾರ ಫೋಟೋ 4ರಲ್ಲಿ ವಿವಾಹ ನಡೆಯುವ ಸಂದರ್ಭ ದೂರುದಾರರು ಸೇರಿದಂತೆ ಇತರರೂ ಮಾಸ್ಕ್ ಧರಿಸಿಲ್ಲ. ಕೊರೊನಾ ಸಂದರ್ಭ ಮಾಸ್ಕ್ ಧರಿಸುವುದು ಕಡ್ಡಾಯ. ಈ ಕಾರಣದಿಂದ ಹೋಶಿಯಾರ್ ಪುರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂರುದಾರರು 15 ದಿನದೊಳಗೆ ಹತ್ತು ಸಾವಿರ ರೂಪಾಯಿ ಠೇವಣಿ ಇಡುವಂತೆ ನ್ಯಾಯಾಧೀಶರು ಆದೇಶ ನೀಡಿದ್ದರು.
ದಂಪತಿ ದೂರಿನಲ್ಲಿ ಲಗತ್ತಿಸಿದ್ದ ಫೋಟೋಗಳನ್ನು ಹೈಕೋರ್ಟ್ ಪೀಠದ ಜಸ್ಟೀಸ್ ಹರಿಪಾಲ್ ವರ್ಮಾ ಅವರು, ದಂಪತಿ ಮಾಸ್ಕ್ ಧರಿಸದೇ ಇರುವುದನ್ನು ಕಂಡು ಹತ್ತು ಸಾವಿರ ರೂಪಾಯಿ ದಂಡ ವಿಧಿಸಿರುವುದಾಗಿ ವರದಿ ವಿವರಿಸಿದೆ.