ಕೊಚ್ಚಿ, ಜೂ. 03 (Daijiworld News/MB) : ಕೇರಳದಲ್ಲಿ ಗರ್ಭಿಣಿ ಆನೆಗೆ ಪಟಾಕಿ ತುಂಬಿಸಿದ ಅನಾನಸ್ ಹಣ್ಣು ನೀಡಿ ಹತ್ಯೆಗೈದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು ಈ ನಡುವೆ ಒಂದು ತಿಂಗಳ ಹಿಂದೆಯೂ ಈ ರೀತಿಯೇ ಅನುಮಾನ್ಪದವಾಗಿ ಆನೆಯೊಂದು ಸಾವನ್ನಪ್ಪಿತ್ತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಕೊಲ್ಲಂ ಜಿಲ್ಲೆಯ ಪುನಲೂರ್ ವಿಭಾಗದ ಪತನಪುರಂ ಅರಣ್ಯಪ್ರದೇಶದಲ್ಲಿ ಏಪ್ರಿಲ್ ತಿಂಗಳಲ್ಲಿ ಆನೆಯೊಂದು ಬಾಯಿಯಲ್ಲಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದು ಇದೀಗ ಈ ಆನೆಯ ಸಾವಿನ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಹೆಣ್ಣಾನೆಯೊಂದು ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹಿಂಡಿನಿಂದ ದೂರವಾಗಿದ್ದ ಆನೆಯ ದವಡೆ ಮುರಿದಿದ್ದು ಆಹಾರ ಸೇವಿಸಲು ಅದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ನಿತ್ರಾಣಗೊಂಡಿತ್ತು. ಆ ಆನೆಗೆ ಚಿಕಿತ್ಸೆ ನೀಡಿದರೂ ದುರದೃಷ್ಟವಶಾತ್ ಅದು ಸಾವನ್ನಪ್ಪಿತು. ಈ ಘಟನೆಗೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದ್ದು ಈ ಆನೆಗೂ ಪಟಾಕಿ ತುಂಬಿಸಿದ ಆಹಾರ ನೀಡಿರುವನ ಶಂಕೆಯಿದೆ. ನಾವು ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಆಹಾರ ಅರಸಿ ಬಂದ ಗರ್ಭವತಿ ಆನೆಗೆ ಪಟಾಕಿ ತುಂಬಿಸಿದ ಅನಾನಸ್ ಹಣ್ಣುಗಳನ್ನು ತಿನ್ನಲು ನೀಡಿದ ಪರಿಣಾಮ ಸೈಲೆಂಟ್ ವ್ಯಾಲಿ ಅರಣ್ಯ ಪ್ರದೇಶದಲ್ಲಿ ಮೇ 27ರಂದು ಗರ್ಭಿಣಿ ಆನೆಯೊಂದು ಸಾವಿಗೀಡಾಗಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಆನೆಗಳ ಸಾವಿಗೆ ಸಂಬಂಧಿಸಿ ವರದಿ ನೀಡುವಂತೆ ವನ್ಯಜೀವಿ ವಿಭಾಗದ ಉನ್ನತ ಅಧಿಕಾರಿಗಳಿಗೆ ಕೇರಳ ಅರಣ್ಯ ಸಚಿವ ಕೆ. ರಾಜು ಸೂಚಿಸಿದ್ದಾರೆ.