ಬೆಂಗಳೂರು, ಜೂ 03 (Daijiworld News/MSP): ಶಾಲೆಗಳನ್ನು ಜುಲೈ 1ರಂದು ತೆರೆಯುವುದಿಲ್ಲ. ಅದು ಕೇವಲ ಯೋಚಿತ ದಿನಾಂಕವಷ್ಟೆ. ಶಾಲೆ ಪ್ರಾರಂಭದ ಬಗ್ಗೆ ಅನುದಾನಿತ, ಅನುದಾನ ರಹಿತ, ಮತ್ತು ಸರ್ಕಾರಿ ಶಾಲೆಗಳಲ್ಲಿ ಪೋಷಕರ ಸಭೆಯ ನಿರ್ಣಯ ಕ್ರೋಡೀಕರಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ನಂತರವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಸಂಬಂಧ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಜೂ.10,11,12ರ ಒಳಗೆ ಮುಖ್ಯಶಿಕ್ಷಕರಿಗೆ ಪಾಲಕರ, ಪಾಲುದಾರರ ಮತ್ತು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಸಭೆ ನಡೆಸಿ ಮಾಹಿತಿ ನೀಡುವಂತೆ ಕೋರಿದ್ದೇವೆ. ಇದೆಲ್ಲವನ್ನು ಕ್ರೋಡೀಕರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಹಾಗೆಯೇ ರಾಜ್ಯದಲ್ಲೂ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಅಲ್ಲಿಯವರೆಗೂ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭವಾಗುವುದಿಲ್ಲ ಎಂದರು.
ತಕ್ಷಣವೇ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಸಿದ್ಧರಿಲ್ಲ ಎಂಬ ಅರಿವು ಸರ್ಕಾರಕ್ಕೆ ಇದೆ. ಸದ್ಯಕೆ ಶಾಲೆಗಳನ್ನು ಆರಂಭಿಸದಂತೆ ಬಹುತೇಕ ಜನರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕೂಡಾ ಗಮನಕ್ಕೆ ತೆಗೆದುಕೊಳ್ಳಲಾಗುವುದು. ಹಾಗೆಯೇ ತರಾತುರಿಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಮಕ್ಕಳ ಹಿತಮುಖ್ಯವಾಗಿದ್ದು ಖಾಸಗಿ ಲಾಬಿಗೂ ಮಣಿಯುವುದಿಲ್ಲ. ಸಮಗ್ರ ಮಹಿತಿ ಕಲೆ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.