ಬೆಂಗಳೂರು, ಜೂ 03 (DaijiworldNews/PY) : ಮೊದಲ ಹಂತದಲ್ಲಿ 16 ಜಿಲ್ಲೆಗಳ 41 ತಾಲ್ಲೂಕುಗಳಲ್ಲಿ ಅಟಲ್ ಭೂಜಲ್ ಯೋಜನೆಯಡಿ ನೀರಿನ ಅಂತರ್ಜಲಮಟ್ಟ ಏರಿಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನನಾಡಿದ ಅವರು, ಈ ಯೋಜನೆಗಾಗಿ ಕೇಂದ್ರ ಸರ್ಕಾರವೇ 16 ಜಿಲ್ಲೆಗಳನ್ನು ಆಯ್ಕೆ ಮಾಡಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ಕೇಂದ್ರ ಸರ್ಕಾರವು 1,230 ಕೋಟಿಯನ್ನು ಮೀಸಲಿಟ್ಟಿದೆ ಎಂದು ತಿಳಿಸಿದರು.
ಭೂಮಿಗೆ ಮಳೆಯ ಮೂಲಕ ಬಿದ್ದ ನೀರು ಇಂಗುತ್ತಿಲ್ಲ. ರಾಜ್ಯದಲ್ಲಿ ನೀರಿನ ಮಟ್ಟ ಬಹಳ ಕುಸಿದಿದೆ ಹಾಗೂ ಅಂತರ್ಜಲ ಮಟ್ಟವೂ ಕುಸಿದಿದೆ. ಈ ನಿಟ್ಟಿನಲ್ಲಿ ಅಂತರ್ಜಲ ವೃದ್ದಿ ಅವಶ್ಯಕ. ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಯಿತು ಎಂದರು.
ಬೆಂಗಳೂರಿನ ಬೆಳ್ಳಂದೂರು ಕೆರೆಯ ಹೂಳು ತೆಗೆಯಲು ₹300 ಕೋಟಿ ಬಂದಿದೆ, ಆದರೆ, ಹೂಳು ತೆಗೆಯಲು ಆಗುತ್ತಿಲ್ಲ. ಪ್ರತಿನಿತ್ಯ 300 ರಿಂದ 400 ಲಾರಿ ಲೋಡ್ಗಳಷ್ಟು ಹೂಳು ತೆಗೆದು ಸಾಗಿಸಬೇಕು. ಸಾರ್ವಜನಿಕರು ಇದಕ್ಕೆ ಆಕ್ಷೇಪ ಎತ್ತಬಹುದು. ಹಸಿರು ಪೀಠ ಹೂಳು ಎತ್ತಲು ಸೂಚನೆ ನೀಡಿದೆ. ಹೂಳು ತೆಗೆಯಲು ಎರಡು ವರ್ಷವಾದರೂ ಬೇಕು. ಸಾರ್ವಜನಿಕರ ಸಹಕಾರವೂ ಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಸೂಚನೆಯಂತೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ರಾಮನಗರ, ತುಮಕೂರು, ಕೋಲಾರ, ಹಾಸನ, ಚಿಕ್ಕಮಗಳೂರು, ಬಳ್ಳಾರಿ, ಬಾಗಲಕೋಟೆ, ಗದಗ, ಬೆಳಗಾವಿ ಜಿಲ್ಲೆಯಲ್ಲಿ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.
ಹಾಸನ ಜಿಲ್ಲಾ ಉಸ್ತುವಾರಿಯಿಂದ ಮುಕ್ತಗೊಳಿಸಿರುವುದಕ್ಕೆ ಬೇಸರವಿಲ್ಲ. ತುಮಕೂರು ಜಿಲ್ಲಾ ಉಸ್ತುವಾರಿಯಿದೆ. ಹಾಸನ ಜಿಲ್ಲಾ ಉಸ್ತುವಾರಿ ಆಗಿದ್ದ ಸಂದರ್ಭ ಶಾಸಕ ಎಚ್.ಡಿ.ರೇವಣ್ಣ ನನಗೆ ಕಾಟ ಕೊಟ್ಟಿಲ್ಲ. ಅವರಿಂದ ಯಾವುದೇ ಸಮಸ್ಯೆ ಎದುರಾಗಲಿಲ್ಲ ಎಂದು ತಿಳಿಸಿದರು.