ಬೆಂಗಳೂರು, ಜೂ 03 (DaijiworldNews/PY) : ಸಿಎಂ ಬಿಎಸ್ವೈ ಅವರನ್ನು ಬುಧವಾರ ಬಿಜೆಪಿ ಹಿರಿಯ ಶಾಸಕ ಉಮೇಶ ಕತ್ತಿ ಅವರು ಭೇಟಿ ಮಾಡಿದ್ದು, ಆದಷ್ಟು ಬೇಗ ಸಚಿವರನ್ನಾಗಿ ಮಾಡುತ್ತೇನೆ. ಆ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದು ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಉಮೇಶ್ ಕತ್ತಿ ಕಳೆದ ವಾರ ಭೋಜನ ಕೂಟ ನಡೆಸಿದ್ದು, ಇಂದು ಸಿಎಂ ಬಿಎಸ್ವೈ ಅವರೊಂದಿಗೆ ಸುಮಾರು 20 ನಿಮಿಷ ಮಾತುಕತೆ ನಡೆಸಿದರು.
ಈ ಸಂದರ್ಭ, ರಾಜ್ಯಸಭೆಯಲ್ಲಿ ತಮ್ಮ ಸಹೋದರ ರಮೇಶ್ ಕತ್ತಿ ಅವರಿಗೆ ಟಿಕೆಟ್ ನೀಡುವಂತೆ ಉಮೇಶ್ ಕತ್ತಿ ಮನವಿ ಮಾಡಿದರು. ಟಿಕೆಟ್ ಕೊಡುವ ಅಥವಾ ಬಿಡುವ ವಿಚಾರ ವರಿಷ್ಠರಿಗೆ ಬಿಟ್ಟಿದ್ದು, ಅವರೇ ಎಲ್ಲವನ್ನೂ ತೀರ್ಮಾನಿಸುತ್ತಾರೆ. ಆದರೆ, ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಿ, ನಿನ್ನನ್ನು ಮಂತ್ರಿ ಮಾಡುತ್ತೇನೆ ಎಂದು ಬಿಎಸ್ವೈ ಅವರು ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಸಂದರ್ಭ ಕಳೆದ ವಾರ ಸಭೆಯಲ್ಲಿ ಶಾಸಕರು ಹಾಗೂ ತಮ್ಮ ಮಧ್ಯೆ ನಡೆದ ಮಾತುಕತೆಯ ವಿವರಗಳನ್ನು ನೀಡಿದ್ದು, ಪ್ರತಿಯೊಬ್ಬ ಶಾಸಕರ ಅಭಿಪ್ರಾಯವನ್ನು ಅವರು ಹೇಳಿದರು.