ಮುಂಬೈ, ಜೂ 04 (Daijiworld News/MSP): ಸಾಲ ಪಡೆದು ದೇಶ ಬಿಟ್ಟು ಪರಾರಿಯಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಯಾವುದೇ ಕ್ಷಣದಲ್ಲಾದರೂ ಭಾರತಕ್ಕೆ ಕರೆತರುವ ಸಾಧ್ಯತೆ ಇದೆ. ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಬ್ರಿಟಿಷ್ ನ್ಯಾಯಾಲಯ ಈಗಾಗಲೇ ಮುದ್ರೆ ಹಾಕಿದೆ.
ಬರೋಬ್ಬರಿ 9 ಸಾವಿರ ಕೋಟಿ ಸಾಲ ಪಡೆದು ವಂಚಿಸಿ ಇಂಗ್ಲೆಂಡ್ ಗೆ ಪರಾರಿಯಾಗಿದ್ದ ಮಲ್ಯ ಬ್ಯಾಂಕ್ ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣಗಳನ್ನು ಎದುರಿಸುತ್ತಿದ್ದು ಈ ಸಂಬಂಧ ಬ್ರಿಟನ್ನಲ್ಲಿ ಎಲ್ಲಾ ಕಾನೂನು ವಿಧಿವಿಧಾನಗಳು ಪೂರ್ಣಗೊಂಡಿವೆ. ಹೀಗಾಗಿ ವಿಜಯ್ ಮಲ್ಯ ಅವರನ್ನು ಯಾವುದೇ ಸಮಯದಲ್ಲಿ ಭಾರತಕ್ಕ ಮರಳಿ ತರಬಹುದು . ಮಲ್ಯರ ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲಾಗಿರುವುದರಿಂದ ಸಿಬಿಐ ಹಾಗೂ ಇಡಿ ಅಧಿಕಾರಿಗಳು ಮಲ್ಯರನ್ನು ಮುಂಬೈಗೆ ಕರೆದುಕೊಂಡು ಬರಲಿದ್ದಾರೆ.
ಪಲಾಯನಗೊಂಡ ಉದ್ಯಮಿ ಮಲ್ಯ ಜೊತೆ ಕೇಂದ್ರ ತನಿಖಾ ದಳ (CBI) ಮತ್ತು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇರುತ್ತಾರೆ. ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ವೈದ್ಯಕೀಯ ತಂಡವು ಅವರ ಆರೋಗ್ಯ ತಪಾಸಣೆ ನಡೆಸಲಿದೆ. ಮಲ್ಯ ರಾತ್ರಿಯಲ್ಲಿ ಮುಂಬೈಗೆ ಇಳಿದರೆ, ಅವರು ನಗರದ ಸಿಬಿಐ ಕಚೇರಿಯಲ್ಲಿ ಸ್ವಲ್ಪ ಸಮಯ ಕಳೆಯಬೇಕಾಗುತ್ತದೆ. ಬಳಿಕ ಅವರನ್ನು ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
2018ರ ಆಗಸ್ಟ್ ನಲ್ಲಿ ವಿಜಯ ಮಲ್ಯರನ್ನು ಮುಂಬೈನ ಆರ್ಥರ್ ರೋಡ್ ನಲ್ಲಿರುವ ಜೈಲಿನ ಕೋಣೆಯಲ್ಲಿ ಇರಿಸುವುದಾಗಿ ಸಿಬಿಐ ಅಧಿಕಾರಿಗಳು ವಿಡಿಯೋ ಮಾಡಿ ಯುಕೆ ನ್ಯಾಯಾಲಯಕ್ಕೆ ಕಳುಹಿಸಿದ್ದರು. ಇದೀಗ ಮಲ್ಯರನ್ನು ಇರಿಸಿಕೊಳ್ಳಲು ಎಲ್ಲಾ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ.