ಬೆಂಗಳೂರು, ಜೂ. 04 (Daijiworld News/MB) : ಲಾಕ್ಡೌನ್ ಕಾರಣದಿಂದಾಗಿ ಸಂಕಷ್ಟದಲ್ಲಿದ್ದ ಕಟ್ಟಡ ಕಾರ್ಮಿಕರ ಖಾತೆಗೆ ಕೊವಿಡ್-19 ಪರಿಹಾರದ ಹಣದಲ್ಲಿ ಒಟ್ಟು 619 ಕೋಟಿ ರೂ. ಜಮಾ ಮಾಡಲಾಗಿದೆ ಎಂದು ಬುಧವಾರ ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ಕೊವಿಡ್-19 ಪರಿಹಾರದ ಹಣದ ಬಗ್ಗೆ ಮಾಹಿತಿ ನೀಡುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸರ್ಕಾರಿ ವಕೀಲರು, 12.39 ಲಕ್ಷ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ತಲಾ 5 ಸಾವಿರ ರೂ. ನಗದನ್ನು ಒಟ್ಟು 619 ಕೋಟಿ ರೂ. ಜಮಾ ಮಾಡಲಾಗಿದೆ. ಹಾಗೆಯೇ ಇದರ ನಿರ್ವಹಣೆಗಾಗಿ ರಾಜ್ಯದಾದ್ಯಂತ 41 ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನ್ಯಾಯಪೀಠವು ಈ ಹೇಳಿಕೆ ಆಲಿಸಿ, ಸರ್ಕಾರ ಹೇಳುವಂತೆ ಈವರೆಗೆ 12.39 ಲಕ್ಷ ಕಾರ್ಮಿಕರಿಗಷ್ಟೇ ಪರಿಹಾರ ತಲುಪಿದ್ದು ಉಳಿದ ಕಾರ್ಮಿಕರಿಗೆ ಯಾವಾಗ ಪರಿಹಾರ ನೀಡಲಾಗುತ್ತದೆ ಮತ್ತು ಕಟ್ಟಡ ಕಾರ್ಮಿಕರನ್ನು ನೋಂದಾಯಿಸಿಕೊಳ್ಳಲು ಅನುಸರಿಸುತ್ತಿರುವ ಮಾನದಂಡಗಳು ಯಾವುದು ಎಂದು ವಿವರಣೆ ನೀಡಲು ಸೂಚನೆ ನೀಡಿದೆ.