ಬರೂಚ್, ಜೂ. 04 (Daijiworld News/MB) : ಗುಜರಾತ್ನ ದಹೇಜ್ ಬಳಿ ಯಶಸ್ವಿ ರಸಯಾನ್ ರಾಸಾಯನಿಕ ಫ್ಯಾಕ್ಟರಿಯ ಬಾಯ್ಲರ್ನಲ್ಲಿ ಬುಧವಾರ ಸ್ಫೋಟವಾಗಿದ್ದು ಮೃತರ ಸಂಖ್ಯೆ ೮ ಕ್ಕೆ ಏರಿಕೆಯಾಗಿದೆ. ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಫ್ಯಾಕ್ಟರಿಯ ಸಮೀಪ ಮೆಥನಾಲ್ ಮತ್ತು ಕ್ಸೈಲನ್ ರಾಸಾಯನಿಕ ಕಂಪೆನಿಗಳು ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹತ್ತಿರದ ಲುವಾರ ಮತ್ತು ಲಖಿಗಾಮ್ ಗ್ರಾಮಗಳ ಸುಮಾರು 4,800 ಮಂದಿಯನ್ನು ಅಧಿಕಾರಿಗಳು ಬೇರೆಡೆಗೆ ವರ್ಗಾವಣೆ ಮಾಡಿದ್ದು ಅಗ್ನಿ ಶಾಮಕ ಸಿಬ್ಬಂದಿಗೆ ಸ್ಪೋಟವನ್ನು ನಿಯಂತ್ರಣಕ್ಕೆ ತರಲು ಸುಮಾರು 6 ಗಂಟೆ ಹಿಡಿಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದುರ್ಘಟನೆ ನಡೆಯುವ ಸಂದರ್ಭದಲ್ಲಿ ಫ್ಯಾಕ್ಟರಿಯೊಳಗೆ ಸುಮಾರು 250 ಮಂದಿ ಕಾರ್ಮಿಕರಿದ್ದು ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಅಧಿಕವಾಗುವ ಸಾಧ್ಯತೆಯಿದೆ. ಸುಮಾರು 18ರಿಂದ 20 ಕಾರ್ಮಿಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ದಹೇಜ್ ಮಾರಿನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿಪುಲ್ ಗಾಗಿಯಾ ಅವರು ತಿಳಿಸಿದ್ದಾರೆ.
ಇನ್ನು ರಾಜ್ಯಸಭಾ ಸದಸ್ಯ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್, ಇತ್ತೀಚೆಗೆ ಕಾರ್ಖಾನೆಗಳಲ್ಲಿ ದುರಂತಗಳು ಅಧಿಕವಾಗುತ್ತಿದೆ. ಸುರಕ್ಷತಾ ಕ್ರಮ ಕೈಗೊಳ್ಳದೆಯೇ ಕಾರ್ಖಾನೆಗೆ ಅವಕಾಶ ಮಾಡಿಕೊಟ್ಟ ಬಿಜೆಪಿ ಸರ್ಕಾರವೇ ಈ ಅವಘಡಕ್ಕೆ ಕಾರಣ ಎಂದು ದೂರಿದ್ದಾರೆ.
ಕೆಲ ವಾರಗಳ ಹಿಂದೆ ಆಂಧ್ರ ಪ್ರದೇಶದ ವಿಶಾಖಪಟ್ಣಂ ಫಾಕ್ಟರಿಯಲ್ಲಿ ಅನಿಲ ಸೋರಿಕೆಯಿಂದಾಗಿ 12 ಮಂದಿ ಸಾವನ್ನಪ್ಪಿದ್ದು ಸುಮಾರು 30 ಕ್ಕೂ ಅಧಿಕ ಪ್ರಾಣಿ ಪಕ್ಷಿಗಳೂ ಕೂಡಾ ಮೃತಪಟ್ಟಿದ್ದವು. ಹಲವರು ಅಸ್ವಸ್ಥರಾಗಿದ್ದರು.