ಮಲಪ್ಪುರಂ, ಜೂ 04 (Daijiworld News/MSP): ಅನನಾಸುವಿನಲ್ಲಿ ಪಟಾಕಿ ಇಟ್ಟು ಗರ್ಭಿಣಿ ಆನೆಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶವ್ಯಾಪ್ತಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಜನತೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ ನೀಡಿದ್ದು, ಈಗಾಗಲೇ ದುಷ್ಟರ ಪತ್ತೆಗೆ ಉನ್ನತ ಮಟ್ಟದ ತಂಡವೊಂದನ್ನು ರಚಿಸಲಾಗಿದೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳದ ಚೀಫ್ ವೈಲ್ಡ್ಲೈಫ್ ವಾರ್ಡನ್ ಸುರೇಂದ್ರ ಕುಮಾರ್, ಇದೊಂದು ಉದ್ದೇಶಪೂರ್ವಕ ಕೃತ್ಯ, ಆನೆ ಹತ್ಯೆ ಮಾಡಿದ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ದುಷ್ಟರ ಬಂಧನ ಆಗೋವರೆಗೂ ನಮಗೆ ನೆಮ್ಮದಿ ಇಲ್ಲ. ಎಲ್ಲರೂ ಅವರ ಬಂಧನದ ಸುದ್ದಿಯನ್ನು ಶೀಘ್ರದಲ್ಲೇ ಕೇಳುತ್ತೀರಿ ಎಂದು ಆಶ್ವಾಸನೆ ನೀಡಿದ್ದಾರೆ.
ಮಲಪ್ಪುರಂ ಜಿಲ್ಲೆಯ ಸೈಲೆಂಟ್ ವ್ಯಾಲಿಯಲ್ಲಿ ಆಹಾರ ಹುಡುಕುತ್ತಾ ಗ್ರಾಮವೊಂದರ ಸಮೀಪಕ್ಕೆ ಬಂದಿದ್ದ ಗರ್ಭಿಣಿ ಆನೆಗೆ ಕೆಲ ಕಿಡಿಗೇಡಿಗಳು ಅನಾನಸು ಹಣ್ಣಿನಲ್ಲಿ ಪಟಾಕಿ ತುಂಬಿ ತಿನ್ನಲು ಕೊಟ್ಟು ಅನೆಯ ಬಾಯಿ ಸಿಡಿಯುವಂತೆ ಮಾಡಿದ್ದರು. ನೋವು ತಾಳಲಾರದ ಆನೆ ಯಾರಿಗೂ ಹಾನಿ ಮಾಡದೆ ಪಕ್ಕದಲ್ಲೇ ಹರಿಯುವ ನದಿ ನೀರಿನಲ್ಲಿ ನಿಂತು ಪ್ರಾಣ ಬಿಟ್ಟಿತ್ತು. ಈ ಘಟನೆ ಬಗ್ಗೆ ಅರಣ್ಯ ಅಧಿಕಾರಿ ಮೋಹನ್ ಕೃಷ್ಣನ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿ ದೇಶಾದ್ಯಂತ ಗರ್ಭಿಣಿ ಆನೆ ಸಾವಿಗೆ ವ್ಯಾಪಕ ಆಕ್ರೋಶ ಕೇಳಿಬಂದಿತ್ತು.