ಬೆಂಗಳೂರು, ಜೂ 04 (DaijiworldNews/PY) : ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣ ಮೀರಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ಇನ್ನೆರಡು ತಿಂಗಳು ಶಾಲೆಗಳನ್ನು ಪ್ರಾರಂಭಿಸುವುದು ಸೂಕ್ತ ಅಲ್ಲ. ಅವಸರದ ತೀರ್ಮಾನ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣ ಮೀರಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ಇನ್ನೆರಡು ತಿಂಗಳು ಶಾಲೆಗಳನ್ನು ಪ್ರಾರಂಭಿಸುವುದು ಸೂಕ್ತ ಅಲ್ಲ. ಅವಸರದ ತೀರ್ಮಾನ ಮಾಡಬಾರದು ಎಂದಿದ್ದಾರೆ.
ಶಾಲೆಗಳನ್ನು ಜುಲೈ ತಿಂಗಳಲ್ಲಿ ಪುನರಾರಂಭಿಸುವ ಪ್ರಸ್ತಾವವನ್ನು ಸುರೇಶ್ ಕುಮಾರ್ ಅವರು ಮುಂದಿಟ್ಟಿದ್ದಾರೆ. ಇದರಿಂದ ಆತಂಕಕ್ಕೀಡಾಗಿರುವ ಪೋಷಕರು ಪ್ರಸ್ತಾವವನ್ನು ವಿರೋಧಿಸುತ್ತಿರುವುದನ್ನು ಸಿಎಂ ಬಿಎಸ್ವೈ ಅವರು ಗಮನಿಸಬೇಕು ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಬ್ರಿಟನ್, ಫ್ರಾನ್ಸ್, ಇಟಲಿ ಸೇರಿದಂತೆ ಬೇರೆ ದೇಶಗಳಲ್ಲಿ ಶಾಲೆಗಳನ್ನು ಪುನರಾರಂಭಿಸಿದ ನಂತರ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗಲಿರುವುದು ವರದಿಯಾಗುತ್ತಿವೆ. ಎರಡು ತಿಂಗಳ ನಂತರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಶಾಲೆಗಳ ಪುನರಾರಂಭದ ಬಗ್ಗೆ ಯೋಚನೆ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ.