ಬೆಂಗಳೂರು, ಜೂ. 04 (Daijiworld News/MB) : ಗ್ರಾಹಕರಾಗಿ ಬರುವ ವ್ಯಕ್ತಿಗಳ ಕೈಯಲ್ಲಿ ಕ್ವಾರಂಟೈನ್ ಸ್ಟ್ಯಾಂಪ್ ಇದೆಯೇ ಎಂದು ಪರಿಶೀಲನೆ ನಡೆಸಿ ಎಂದು ಎಲ್ಲಾ ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆ, ಮಾಲ್, ಧಾರ್ಮಿಕ ಸ್ಥಳ, ಹೋಟೆಲ್ಗಳಿಗೆ ಸರ್ಕಾರ ಸೂಚಿಸಿದೆ.
ಈ ಬಗ್ಗೆ ತಿಳಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ. ವಿಜಯಭಾಸ್ಕರ್ ಅವರು, ತಮ್ಮೆಡೆಗೆ ಗ್ರಾಹಕರಾಗಿ ಬರುವ ವ್ಯಕ್ತಿಯ ಕೈಯಲ್ಲಿ ಕ್ವಾರಂಟೈನ್ ಸ್ಟ್ಯಾಂಪ್ ಹಾಕಲಾಗಿದೆಯೇ ಎಂದು ಪರಿಶೀಲನೆ ನಡೆಸಬೇಕು. ಸಾರ್ವಜನಿಕರು ಕೂಡಾ ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.
ಹೋಂ ಕ್ವಾರಂಟೈನ್ ಇರಿಸುವ ಮೊದಲು ಕ್ವಾರಂಟೈನ್ ಮುದ್ರೆಯನ್ನು ಹಾಕಲಾಗಿರುತ್ತದೆ. ಅದರಲ್ಲಿ ಕ್ವಾರಂಟೈನ್ ಕೊನೆಗೊಳುವ ದಿನಾಂಕವೂ ಇರುತ್ತದೆ. ಹೋಂ ಕ್ವಾರಂಟೈನ್ ಮುಗಿಯದೆಯೇ ಕ್ವಾರಂಟೈನ್ನಲ್ಲಿ ಇರಬೇಕಾದ ವ್ಯಕ್ತಿ ಓಡಾಡುತ್ತಿದ್ದಲ್ಲಿ ಸಾರ್ವಜನಿಕರು ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಿ ತಿಳಿಸಬಹುದು ಎಂದು ಹೇಳಿದ್ದಾರೆ.