ನವದೆಹಲಿ, ಜೂ. 04 (Daijiworld News/MB) : ಕೊರೊನಾ ಬಿಕ್ಕಟ್ಟನ್ನು ಅವಕಾಶವೆಂದು ಪರಿಗಣಿಸಲು ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುರುವಾರ ವರ್ಚುವಲ್ ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರಿಗೆ ತಿಳಿಸಿದ್ದಾರೆ.
ಕೊರೊನಾ ಹಾಗೂ ಭಾರತದ ಸ್ಥಿತಿಗತಿ ಬಗ್ಗೆ ಮಾತನಾಡಿದ ಅವರು ಭಾರತದ ಹಲವು ಕ್ಷೇತ್ರಗಳಲ್ಲಿ ಸುಧಾರಣೆ ಕಾರ್ಯ ಆರಂಭಿಸಲಾಗಿದ್ದು ಶೀಘ್ರದಲ್ಲಿ ಇದರ ಫಲಿತಾಂಶ ತಳಮಟ್ಟದಿಂದಲ್ಲೇ ಕಂಡು ಬರಲಿದೆ. ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಇದು ಸಾಕಷ್ಟು ಸವಾಲುಗಳನ್ನು ನೀಡಿದೆ ಎಂದು ಹೇಳಿದರು.
ಹಾಗೆಯೇ ಭಾರತ-ಆಸ್ಟ್ರೇಲಿಯಾ ಸಂಬಂಧಗಳ ಕುರಿತಾಗಿ ಪ್ರಧಾನಿ ಮೋದಿಯವರು ಮಾತನಾಡಿದ್ದು ಮಾತು ಆರಂಭ ಮಾಡುವಾಗಲೇ ಆಸ್ಟ್ರೇಲಿಯಾದಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದವರಿಗೆ ಸಂತಾಪ ವ್ಯಕ್ತಪಡಿಸಿದರು.
ಕೊರೊನಾದ ವಿರುದ್ಧ ಹೋರಾಡುತ್ತಿರುವ ಈ ಸಮಯ ಭಾರತ ಮತ್ತು ಆಸ್ಟ್ರೇಲಿಯಾದ ನಡುವಣ ಸಂಬಂಧವನ್ನು ಸುಧಾರಣೆ ಮಾಡಲು ಸಹಕಾರಿ. ಈ ಸಂದರ್ಭದಲ್ಲಿ ನಮ್ಮ ಸ್ನೇಹದ ಬಲವರ್ಧನೆಗೆ ಸಾಕಷ್ಟು ಅವಕಾಶಗಳಿದ್ದು ಭಾರತ ಅದಕ್ಕೆ ಬದ್ಧವಾಗಿದೆ. ನಮ್ಮ ಸಂಬಂಧ ಸ್ಥಿರತೆಗೆ ಹೇಗೆ ಕಾರಣವಾಗುತ್ತದೆ ಎಂಬುದು ಈಗ ಮುಖ್ಯವಾಗಿದೆ. ನಮ್ಮ ಸಂಬಂಧದ ಬಲಪಡಿಸುವುದು ನಮಗೆ ಮಾತ್ರವಲ್ಲದೆ ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಇಡೀ ಜಗತ್ತಿಗೆ ಮುಖ್ಯ ಎಂದು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್, ನೀವು ಭಾರತದಲ್ಲಿ ನಾಯಕತ್ವ ಹೊಂದಿರುವುದು ಮಾತ್ರವಲ್ಲದೆ ಜಿ20, ಇಂಡೊ-ಫೆಸಿಫಿಕ್ಗಳಲ್ಲಿಯೂ ನಿಮ್ಮ ಪ್ರಭಾವವಿದೆ. ಇಂತಹ ಕಠಿಣವಾದ ಸಮಯದಲ್ಲೂ ನೀವು ರಚನಾತ್ಮಕ, ಸಕಾರಾತ್ಮಕ, ಸ್ಥಿರತೆಯಿಂದ ನಿರ್ಧಾರ ಕೈಗೊಂಡಿದ್ದೀರಿ. ನಾವು ಕೂಡಾ ಮುಕ್ತ, ಸಮೃದ್ಧ ಇಂಡೋ-ಪೆಸಿಫಿಕ್ಗೆ ಬದ್ಧರಾಗಿದ್ದು ಮುಂಬರುವ ವರ್ಷದಲ್ಲಿ ಆ ಪ್ರದೇಶದಲ್ಲಿ ಭಾರತದ ಪಾತ್ರವೇ ನಿರ್ಣಾಯಕವಾಗುತ್ತದೆ ಎಂದು ಹೇಳಿದರು.