ಬೆಂಗಳೂರು, ಜೂ 04 (Daijiworld News/MSP): ಕೊವೀಡ್ -19 ವೈರಸ್ ನಂತಹ ಸಂಕಷ್ಟದ ಸಮಯದಲ್ಲಿ ಒಂದು ವೇಳೆ ರಾಜ್ಯದಲ್ಲಿ ಏನಾದರೂ ಸಮ್ಮಿಶ್ರ ಸರ್ಕಾರವಿದ್ದಿದ್ದರೆ ಸೋಂಕಿಗೆ ತುತ್ತಾಗಿ 50,000ಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿದ್ದರು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ, ಅವರು ಸಮ್ಮಿಶ್ರ ಸರ್ಕಾರಕ್ಕೆ ಸಮನ್ವಯತೆಯೇ ಇರಲಿಲ್ಲ ಇನ್ನು ಕೊವೀಡ್ ಹೇಗೆ ನಿಯಂತ್ರಿಸುತ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಕಾರಣ ಸಮ್ಮಿಶ್ರ ಸರ್ಕಾರ ಮಾಡುತ್ತಿದ್ದ ದೊಡ್ಡ ಅನಾಹುತ ತಪ್ಪಿತು ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರವಿದ್ದಿದ್ದರೆ ಕೇಂದ್ರ ಸರ್ಕಾರದ ಯಾವುದೇ ಆದೇಶ ಪಾಲನೆ ಮಾಡದೇ ಉಲ್ಲಂಘನೆ ಮಾಡುತ್ತಿದ್ದರು. ಪ್ರಧಾನಿ ಮೋದಿ ಹೇಳಿದರು ಅಂತಾ ಎಲ್ಲವನ್ನೂ ಮಾಡಿಬಿಡಬೇಕೋ ಎಂದು ಪ್ರಶ್ನಿಸುತ್ತಿದ್ದರು. ಸಮ್ಮಿಶ್ರ ಸರ್ಕಾರವಿದ್ದು ಜಮೀರ್ ಅಹಮ್ಮದ್ ಸಚಿವರಾಗಿರುತ್ತಿದ್ದರೆ ಈಗ ಏನಾಗುತ್ತಿತ್ತು? ಕಾಂಗ್ರೆಸ್ ಪಕ್ಷ ಮುಸ್ಲಿಮರ ಪಕ್ಷಪಾತಿ. ಹೀಗಾಗಿ ಯಾರನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕರ್ನಾಟಕದ ಸ್ಥಿತಿ ಅಮೆರಿಕದ ಕೊರೊನಾ ಸ್ಥಿತಿಯಂತೆ ಆಗಿಬಿಡುತ್ತಿತ್ತು. ಸಮ್ಮಿಶ್ರ ಸರ್ಕಾರದ ಪತನದಿಂದ ಅದು ತಪ್ಪಿದೆ ಎಂದು ಹೇಳಿದರು.