ಮುಂಬೈ, ಜೂ 04 (Daijiworld News/MSP): ಬಾಲಿವುಡ್ ನ ದಂತಕಥೆ ಎನಿಸಿಕೊಂಡಿರುವ ನಿರ್ದೇಶಕ ಬಸು ಚಟರ್ಜಿ (90) ಇಂದು ಚಿರನಿದ್ರೆಗೆ ಜಾರಿದ್ದಾರೆ. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
70 ಮತ್ತು 80 ರ ದಶಕಗಳಲ್ಲಿ ಹಿಂದಿ ಸಿನೆಮಾವನ್ನು ವಾಸ್ತವಿಕತೆಯ ಮಟ್ಟಕ್ಕೆ ತರುವ ಪ್ರಯತ್ನದಲ್ಲಿ, ಬಾಸುಡಾ 'ಚಿತ್ ಚೋರ್, ರಜನಿ, ಬಾತೋ ಬಾತೋ ಮೇ, ಉಸ್ ಪಾರ್,ಛೋಟಿ ಸಿ ಬಾತ್ , ಖಟ್ಟಾ-ಮೀಠಾ, ಪಿಯಾ ಕಾ ಘರ್, ಚಕ್ರವ್ಯೋಹ, ಶೌಕೀನ್, ಏಕ್ ರುಕಾ ಹುವಾ ಫೈಸಲಾ, ಜೀನಾ ಯಹಾ, ಪ್ರಿಯತಂ, ಸ್ವಾಮೀ, ಅಪ್ನೆ ಪರಾಯೇಗಳಂತಹ ಅನೇಕ ಚಿತ್ರಗಳನ್ನು ನಿರ್ದೇಶಿಸಿದರು ಮತ್ತು ಹಿಂದಿ ಚಿತ್ರರಂಗದಲ್ಲಿ ತನ್ನದೇ ಆದ ಒಂದು ವಿಶಿಷ್ಟ ಛಾಪು ಮೂಡಿಸಿದ್ದರು.
ಚಟರ್ಜಿ ನಿಧನಕ್ಕೆ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಮುಂಬೈನ ಸಾಂತಾ ಕ್ರೂಝ್ ಚಿತಾಗಾರದಲ್ಲಿ ಬಸು ಚಟರ್ಜಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.