ಅಹಮದಾಬಾದ್, ಜೂ 04 (DaijiworldNews/PY) : ಜೂನ್ 19ರ ರಾಜ್ಯಸಭಾ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆಗೂ ಮುನ್ನ ಇಬ್ಬರು ಗುಜರಾತ್ ಕಾಂಗ್ರೆಸ್ ಶಾಸಕರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗುಜರಾತ್ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರು, ಅವರ ರಾಜೀನಾಮೆಯನ್ನು ನಾನು ಅಂಗೀಕರಿಸಿದ್ದೇನೆ. ಅವರು ಈಗ ಶಾಸಕರಾಗಿ ಮುಂದುವರಿದಿಲ್ಲ ಎಂದರು.
ಕಾಂಗ್ರೆಸ್ ಶಾಸಕರಾದ ಅಕ್ಷಯ್ ಪಟೇಲ್ ಹಾಗೂ ಜಿತು ಚೌಧರಿ ಗುಜರಾತ್ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಹಸ್ತಾಂತರಿಸಿದ್ದಾರೆ.
ಇದಕ್ಕೂ ಮುನ್ನ ಮಾರ್ಚ್ನಲ್ಲಿಯೂ ಕಾಂಗ್ರೆಸ್ನ ಐವರು ಶಾಸಕರು ರಾಜೀನಾಮೆ ನೀಡಿದ್ದರು. 182 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ 103 ಶಾಸಕರು ಮತ್ತು ವಿರೋಧ ಪಕ್ಷ ಕಾಂಂಗ್ರೆಸ್ ಪ್ರಸ್ತುತ 66 ಶಾಸಕರನ್ನು ಹೊಂದಿದೆ. ಗುಜರಾತ್ನಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಬಿಜೆಪಿಯಿಂದ ಮೂವರು ಹಾಗೂ ಕಾಂಗ್ರೆಸ್ನಿಂದ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಬಿಜೆಪಿಯು ಅಭಯ್ ಭಾರದ್ವಾಜ್, ರಮಿಲಾ ಬಾರಾ ಮತ್ತು ನರ್ಹಾರಿ ಅಮೀನ್ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಹಿರಿಯ ನಾಯಕರಾದ ಶಕ್ತಿಸಿಂಹ್ ಗೋಹಿಲ್ ಹಾಗೂ ಭರತ್ ಸಿಂಹ್ ಸೋಲಂಕಿ ಅವರನ್ನು ಚುನಾವಣೆಗೆ ಕಣಕ್ಕಿಳಿಸಿದೆ.