ನವದೆಹಲಿ, ಜೂ 05 (DaijiworldNews/PY) : ವರ್ಷದ ಎರಡನೇ ಚಂದ್ರಗ್ರಹಣ ಇಂದು ರಾತ್ರಿ ಸಂಭವಿಸಲಿದ್ದು, ಈ ಬಾರಿ ಸ್ಟ್ರಾಬೆರಿ ಚಂದ್ರಗ್ರಹಣವಾಗಿದೆ.
ಪ್ರಥಮ ಚಂದ್ರಗ್ರಹಣವು ಈ ವರ್ಷದ ಜನವರಿ 10ರಂದು ಸುಮಾರು 4ಗಂಟೆ ಐದು ನಿಮಿಷಗಳ ಕಾಲ ಭಾರತದಲ್ಲಿ ಗೋಚರಿಸಿತ್ತು. ಇದೀಗ ಎರಡನೆಯ ಚಂದ್ರಗ್ರಹಣ ಜೂನ್ 5 ಹಾಗೂ 6ರ ರಾತ್ರಿ ಸಂಭವಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಬಾರಿಯ ಚಂದ್ರಗ್ರಹಣವನ್ನು ಪೆನುಂಬ್ರಲ್ ಎಕ್ಲಿಪ್ಸ್ ಎಂದು ಹೆಸರಿಸಲಾಗಿದ್ದು, ಇಂದು ಚಂದ್ರನ ಮೇಲ್ಮೈ ಶೇ.75ರಷ್ಟು ಭಾಗವು ಭೂಮಿಯಿಂದ ಭಾಗಶಃ ಮುಚ್ಚಿರುವ ಕಾರಣ ಅದರ ಹೊರಭಾಗದ ನೆರಳು ಮಾತ್ರ ಗೋಚರಿಸುತ್ತದೆ. ಹಾಗಾಗಿ ಪೂರ್ಣಪ್ರಮಾಣದಲ್ಲಿ ಗೋಚರವಾಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಬಾರಿಯದ್ದು ಸ್ಟ್ರಾಬೆರಿ ಚಂದ್ರಗ್ರಹಣ. ಅಮೆರಿಕದಲ್ಲಿ ಸ್ಟ್ರಾಬೆರಿ ಹಣ್ಣುಗಳ ಸೀಸನ್ ಆಗಿದ್ದು, ಹಾಗಾಗಿ ಜೂನ್ ತಿಂಗಳಿನಲ್ಲಿ ಸಂಭವಿಸಲಿರುವ ಪೂರ್ಣ ಚಂದ್ರಗ್ರಹಣಕ್ಕೆ ಸ್ಟ್ರಾಬೆರಿ ಚಂದ್ರಗ್ರಹಣ ಎಂದು ಹೆಸರಿಡಲಾಗಿದೆಯಂತೆ. ಇದೇ ರೀತಿಯಾಗಿ ರೋಸ್ ಮೂನ್, ಹಾಟ್ ಮೂನ್ ಮುಂತಾದ ಹೆಸರುಗಳನ್ನು ಈಗಾಗಲೇ ಇಡಲಾಗಿದೆ. ಗ್ರಹಣದ ಸಂದರ್ಭ ಚಂದ್ರನು ಭೂಮಿಯ ನೆರಳಿನಲ್ಲಿಯೇ ಪರಿಭ್ರಮಿಸುವ ಕಾರಣದಿಂದ ಛಾಯಾ ಚಂದ್ರಗ್ರಹಣ ಎನ್ನಲಾಗುತ್ತದೆ.
ಇಂದು ರಾತ್ರಿ 11.15ಕ್ಕೆ ಸ್ಟ್ರಾಬೆರಿ ಚಂದ್ರಗ್ರಹಣ ಪ್ರಾರಂಭವಾಗಲಿದ್ದು, ಜೂನ್ 6ರಂದು 12.54ಕ್ಕೆ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರಿಸಲಿದ್ದು, ಜೂನ್ 6ರ ಬೆಳಗ್ಗಿನ ಜಾವ 2.34ಕ್ಕೆ ಪೂರ್ಣಗೊಳ್ಳಲಿದೆ. ಸ್ಟ್ರಾಬೆರಿ ಚಂದ್ರಗ್ರಹಣ ಮೂರು ಗಂಟೆ 18 ನಿಮಿಷಗಳ ಕಾಲದ್ದಾಗಿದೆ.
ಈ ಚಂದ್ರಗ್ರಹಣವು ದಕ್ಷಿಣ ಅಮೆರಿಕ, ಫೆಸಿಫಿಕ್, ಅಟ್ಲಾಂಟಿಕ್, ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಹಿಂದೂ ಮಹಾಸಾಗರ, ಅಂಟಾರ್ಟಿಕಾ ಭಾಗಗಳಲ್ಲಿ ಗೋಚರಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದು, ಭಾರತದಾದ್ಯಂತ ಗೋಚರಿಸಲಿದೆ.