ಕೊಪ್ಪಳ, ಜೂ 05 (DaijiworldNews/PY) : ಸಿದ್ದರಾಮಯ್ಯ ಅವರು ಸರಿಯಾಗಿ ನಿರ್ವಹಣೆ ಮಾಡದಿದ್ದರಿಂದಲೇ ನಾವು 17 ಜನ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದೆವು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದರು.
ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪೂರ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಾರ್ಥ ರಾಜಕಾರಣ ಹಾಗೂ ಕಾಂಗ್ರೆಸ್ ಮೋಸ ಮಾಡಿದ್ದರಿಂದ ನಾವು ಅಂತಹ ಪಕ್ಷ ತೊರೆಯುವ ಸನ್ನಿವೇಶ ಉಂಟಾಯಿತು ಎಂದರು.
ಬಿಜೆಪಿ ನಮ್ಮನ್ನು ಬೀದಿಗೆ ನಿಲ್ಲಿಸುತ್ತದೆ ಎಂದು ಕೆಲ ಕಾಂಗ್ರೆಸ್ ನಾಯಕರು ಹೇಳುತ್ತಿದ್ದರು. ಈ ನಾನು ಮಂತ್ರಿಯಾಗಿ ಬೀದಿಯಲ್ಲಿ ನಿಂತು ಮಾಧ್ಯಮದ ಮುಂದೆ ಮಾತನಾಡುತ್ತಿದ್ದೇನೆ. ಮುಖ್ಯಮಂತ್ರಿ ಬಿಎಸ್ವೈ ಅವರು ಉತ್ತಮವಾದ ಆಡಳಿತ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಚುನಾವಣೆ ಸಮಯದಲ್ಲಿ ನಮ್ಮ ಗೆಲುವಿಗಾಗಿ ಕುಟುಂಬ ಸದಸ್ಯರೆಲ್ಲರೂ ದುಡಿದಿರುತ್ತಾರೆ. ಹಾಗಾಗಿ ಕೆಲವೊಂದು ಸಲಹೆ, ಸೂಚನೆಗಳನ್ನು ನೀಡುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ನಮ್ಮ ಪರವಾಗಿ ಆಡಳಿತ ನಡೆಸುತ್ತಾರೆ ಎಂದು ಹೇಳುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಬೇಕಾದರೂ ಸಲಹೆ ನೀಡಬಹುದು. ಅದನ್ನು ಸ್ವೀಕಾರ ಮಾಡಬಹುದು ಅಥವಾ ಬಿಡಬಹುದು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಇಬ್ಬರು ಸಿಎಂ ಇದ್ದಾರೆ ಎಂದು ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭ ರಾಕೇಶ್ ಸೂಪರ್ ಸಿಎಂ ಎಂದು ಹೇಳುತ್ತಿದ್ದರು. ಕೆಂಪಯ್ಯ ಸಚಿವ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಸಿದ್ದರಾಮಯ್ಯ ಅವರ ರಾಜಕೀಯ ಉದ್ದೇಶದಿಂದ ಇಬ್ಬರು ಸಿಎಂ ಎಂದು ಹೇಳಿದ್ದಾರೆ. ಅವರ ಆಪಾದನೆಯಲ್ಲಿ ಯಾವುದೇ ರೀತಿಯಾದ ಹುರುಳಿಲ್ಲ. ಇದು ಒಂದು ನಿರಾಧಾರ ಆರೋಪವಾಗಿದೆ. ರಾಜಕೀಯ ಕಾರಣಕ್ಕಾಗಿ ಅವರ ಆರೋಪ ನಡೆಸುತ್ತಿದ್ದಾರೆ ಎಂದರು.