ಕಲಬುರಗಿ, ಜೂ 05 (DaijiworldNews/PY) : ಬಿಜೆಪಿಯಲ್ಲಿ ಶಾಸಕರ ಅಸಮಾಧಾನವಿರುವುದು ನಿಜ. ಆದರೆ, ಅದೇ ದೊಡ್ಡ ವಿಷಯವಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಒಂದೇ ಕುಟುಂಬ ಇದ್ದಂತೆ. ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ. ಎಲ್ಲಾ ಶಾಸಕರು ಸ್ನೇಹಿತರು. ಸಾಮಾನ್ಯವಾಗಿ ಒಟ್ಟಾಗಿ ಕೂಡಿರಬಹುದು. ಅವರು ಯಾರೂ ಸನ್ಯಾಸಿಗಳಲ್ಲ. ಶಾಸಕರ ಪ್ರತ್ಯೇಕ ಸಭೆ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮುಂದಿನ ಮೂರು ವರ್ಷದ ಅವಧಿಯನ್ನು ಸರ್ಕಾರ ಪೂರೈಸಲಿದೆ ಎಂದು ತಿಳಿಸಿದರು.
ಗ್ರಾಮಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕು ಎನ್ನುವುದು ಸರ್ಕಾರದ ಅಪೇಕ್ಷೆ. ಹಾಗಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸಲಹೆ ಪಡೆದುಕೊಳ್ಳಲಾಗಿದೆ. ಸದ್ಯ ಕೊರೊನಾ ಇರುವ ಕಾರಣ ಚುನಾವಣೆ ನಡೆಸುವುದು ಬೇಡ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದು, ಹಾಗಾಗಿ ಚುನಾವಣೆ ಮುಂದೂಡಲಾಗಿದೆ ಎಂದು ಹೇಳಿದರು.
ಶನಿವಾರ ಸಂಜೆ 5 ಗಂಟೆಗೆ ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ ಸಂಬಂಧ ಪಕ್ಷದ ಕೋರ್ ಕಮಿಟಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಈಗಾಗಲೂ ಗ್ರಾ.ಪಂ. ಸಂಬಂಧ ಮೂರು ಆಯ್ಕೆಗಳು ಸರ್ಕಾರದ ಮುಂದೆ ಇದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು. ಆದರೆ, ಸರ್ಕಾರ ಗ್ರಾ.ಪಂ.ಗಳಿಗೆ ಬಿಜೆಪಿ ಕಾರ್ಯಕರ್ತರನ್ನು ನೇಮಿಸಿ ಪಕ್ಷವನ್ನು ಗಟ್ಟಿಗೊಳಿಸಲು ಹೊರಟಿದೆ ಎಂದು ಕಾಂಗ್ರೆಸ್ ನಾಯಕರ ಆರಫೊ ಸುಳ್ಳು. ನಮ್ಮ ಪಕ್ಷದ ಬೇಸ್ ಗಟ್ಟಿಯಾಗಿದೆ. ನಿಮ್ಮ ಬೇಸ್ ನೋಡಿಕೊಳ್ಳಿ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ಗೆ ತಿರುಗೇಟು ನೀಡಿದರು.