ನವದೆಹಲಿ, ಜೂ 05 (Daijiworld News/MSP): ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ದರವನ್ನು ನಿಗದಿಗೊಳಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಇಂದು ಸೂಚನೆ ನೀಡಿದ್ದು ಮಾತ್ರವಲ್ಲದೆ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ನಿಗದಿ ಮಾಡಲಾದ ದರಗಳಲ್ಲೇ ಕೊರೊನಾ ಚಿಕಿತ್ಸೆ ನೀಡಲು ನೀವು ಸಿದ್ದರಿದ್ದೀರಾ ಎಂದು ಖಾಸಗಿ ಆಸ್ಪತ್ರೆಗಳಿಗೆ ಪ್ರಶ್ನಿಸಿದೆ.
ಕೊರೊನಾ ರೋಗಿಗಳಿಗೆ ನೀಡಲಾಗುವ ಚಿಕಿತ್ಸಾ ವೆಚ್ಚ ಹೆಚ್ಚಿಸುವಂತೆ ಖಾಸಗಿ ಆಸ್ಪತ್ರೆಗಳು ಸರ್ಕಾರದ ಬೆನ್ನು ಬಿದ್ದಿರುವ ಸಮಯದಲ್ಲೇ " ರೋಗಿಗಳಿಂದ ಅಧಿಕ ದರ ವಸೂಲಿ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ಮಹತ್ವದ್ದಾಗಿದೆ.
ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿಗೊಳಿಸಬೇಕು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಕೋರಿ ಅವಿಶೇಕ್ ಗೋಯೆಂಕಾ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಸರ್ವೋಚ್ಚ ನ್ಯಾಯಾಲಯ ಕೇಂದ್ರಕ್ಕೆ ಸೂಚನೆ ನೀಡಿದ್ದು, ಒಂದು ವಾರದೊಳಗೆ ಪ್ರತ್ಯುತ್ತರ ನೀಡುವಂತೆ ತಿಳಿಸಿದೆ. ಮಾತ್ರವಲ್ಲದೆ ಸೋಂಕಿತ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿ ಎಂದು ನಾವು ಕೇಳುತ್ತಿಲ್ಲ. ಆದರೆ ಬಡವರಿಗೆ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ನಿಗದಿ ಮಾಡಲಾದ ದರಗಳಲ್ಲೇ ನೀಡಲು ಸಾಧ್ಯವೇ ಎಂದು ಪೀಠ ಪ್ರಶ್ನಿಸಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪ್ರತಿಯನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪರಾಮರ್ಶಿ, ಕೇಂದ್ರದೊಂದಿಗೆ ಈ ಸಂಬಂಧ ಚರ್ಚಿಸಿ ಇನ್ನೊಂದು ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ತಿಳಿಸಿದೆ.