ನವದೆಹಲಿ, ಜೂ 05 (Daijiworld News/MSP): ರಾಜ್ಯಸಭೆಯ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊರೆಯುವ ಒಂದು ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕೃತವಾಗಿ ಕಾಂಗ್ರೆಸ್ ಟಿಕೆಟ್ ನೀಡಿದೆ.
ಜೂ. 19 ರಂದು ನಡೆಯಲಿರುವ ದೈವಾರ್ಷಿಕ ಚುನಾವಣೆ ನಡೆಯಲಿದ್ದು, ಖರ್ಗೆ ಅವರು ಮೇಲ್ಮನೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.
ಕೇಂದ್ರದ ಮಾಜಿ ಸಚಿವ ಖರ್ಗೆ, ಹಾಲಿ ಸದಸ್ಯರಾದ ಬಿ.ಕೆ ಹರಿಪ್ರಸಾದ್, ಮತ್ತು ರಾಜೀವ್ ಗೌಡ ಅವರ ಹೆಸರು ಕಾಂಗ್ರೆಸ್ ನಲ್ಲಿ ಕೇಳಿಬಂದರೂ ಕೊನೆಗೆ ಹೈಕಮಾಂಡ್ ಖರ್ಗೆ ಅವರಿಗೆ ಮಣೆ ಹಾಕಿದೆ.
ಸೋಲಿಲ್ಲದ ಸರದಾರ ಎಂದು ಗುರುತಿಸಿಕೊಂಡಿದ್ದ ಖರ್ಗೆ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಈಗ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ.
ಈಗಿರುವ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಗೆ 1, ಬಿಜೆಪಿಗೆ 2 ಸ್ಥಾನಗಳು ದೊರೆಯುವುದು ಬಹುತೇಕ ಖಚಿತವಾಗಿದ್ದು, ಮತ್ತೊಂದು ಸ್ಥಾನಕ್ಕಾಗಿ ಕಾಂಗ್ರೆಸ್ – ಜೆಡಿಎಸ್ ನಡುವೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.