ಭೋಪಾಲ್, ಜೂ 05 (DaijiworldNews/PY) : ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಅವರ ಸಮ್ಮುಖದಲ್ಲಿ ರಾಜ್ಯದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಲೇಂದು ಶುಕ್ಲಾ ಅವರು ಶುಕ್ರವಾರ ಕಾಂಗ್ರೆಸ್ ಸೇರಿದರು.
ಬಲೇಂದು ಶುಕ್ಲಾ ಅವರು ಈ ಮೊದಲು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದು, ಅವರು ಪಕ್ಷದಲ್ಲಿ ಇರಲಿಲ್ಲ. ಈಗ ಅವರು ಮತ್ತೆ ಪಕ್ಷಕ್ಕೆ ವಾಪಾಸ್ಸಾಗಿದ್ದಾರೆ. ಅವರನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ. ಪಕ್ಷಕ್ಕೆ ಸೇರಲು ಬಯಸುವ ಇನ್ನೂ ಅನೇಕ ಜನರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ತಿಳಿಸಿದ್ದಾರೆ.
2009ರಲ್ಲಿ ಕಾಂಗ್ರೆಸ್ನ ಭಾಗವಾಗಿದ್ದ ಶುಕ್ಲಾ ಅವರು ಪಕ್ಷವನ್ನು ತೊರೆದಿದ್ದರು. ಇತ್ತೀಚೆಗೆ ಬಿಜೆಪಿ ಸೇರಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಭಿನ್ನಾಭಿಪ್ರಾಯದಿಂದಾಗಿ ಪಕ್ಷಕ್ಕೆ ವಿಧಾಯ ಹೇಳಿದ್ದರು. ಸಿಂದಿಯಾ ಬಿಜೆಪಿಗೆ ಸೇರಿರುವ ಬಗ್ಗೆ ಶುಕ್ಲಾ ಕೋಪಗೊಂಡಿದ್ದಾರೆ ಎಂದು ವರದಿಯಾಗಿದೆ.
ಸಿಂಧಿಯಾ ಕಾಂಗ್ರೆಸ್ ತೊರೆದ ನಂತರ ವಿಧಾನಸಭೆಗೆ ಕಾಂಗ್ರೆಸ್ನ 22 ಶಾಸಕರು ರಾಜೀನಾಮೆ ನೀಡಿದ್ದರು. ರಾಜ್ಯದಲ್ಲಿ ಕಮಲ್ನಾಥ್ ನೇತೃತ್ವದ ಸರ್ಕಾರ ಪತನಕ್ಕೆ ಇದು ಕಾರಣವಾಯಿತು.
ಶುಕ್ಲಾ ಅವರ ಪ್ರವೇಶವು ಮುಂಬರುವ ಉಪಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗಲಿದೆ ಎಂದು ಕಾಂಗ್ರೆಸ್ ಭರವಸೆ ಹೊಂದಿದೆ.