ಬೆಂಗಳೂರು, ಜೂ 05 (DaijiworldNews/SM): ರಾಜ್ಯದಲ್ಲಿ ಕೊರೊನಾ ಲಾಕ್ ಡೌನಿಂದಾಗಿ ಜನ ಸಾಮಾನ್ಯರು ಸಂಕಷ್ಟಕ್ಕೀಡಾಗಿರುವುದು ಒಂದೆಡೆಯಾದರೆ, ಇದು ಸರಕಾರಕ್ಕೂ ಹೊಸ ತಲೆನೋವನ್ನುಂಟು ಮಾಡಿದೆ. ಆದಾಯ ಗಳಿಕೆ ಸರಕಾರಕ್ಕೆ ಸವಾಲಾಗಿ ಪರಿಣಮಿಸಿದ್ದು, ದುಂದು ವೆಚ್ಚಗಳಿಗೆ ಬ್ರೇಕ್ ಹಾಕುವುದು ಅನಿವಾರ್ಯವಾಗಿದೆ. ಈ ನಡುವೆ ಅನಧಿಕೃತವಾಗಿರುವ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸುವಂತೆ ಸಿಎಂ ಮತ್ತೆ ಸೂಚನೆ ನೀಡಿದ್ದಾರೆ.
ಕೊರೊನಾ ಲಾಕ್ ಡೌನ್ ಗಿಂತಲೂ ಮೊದಲು ಬಿಪಿಎಲ್ ಬೇಟೆ ತೀವ್ರವಾಗಿ ನಡೆಸಲಾಗುತ್ತಿತ್ತು. ಲಾಕ್ ಡೌನ್ ಗಿಂತಲು ಮೊದಲು ಸುಮಾರು 63 ಸಾವಿರ ಅನಧಿಕೃತ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗಿತ್ತು. ಆದರೆ, ಕೋವಿಡ್-19 ಸಂಕಷ್ಟದಿಂದಾಗಿ ಇದಕ್ಕೆ ಬ್ರೇಕ್ ಬಿದ್ದಿತ್ತು. ಆದರೆ, ರಾಜ್ಯದಲ್ಲಿ ಇನ್ನೂ ಕೂಡ ಲಕ್ಷಾಂತರ ಅನಧಿಕೃತ ಬಿಪಿಎಲ್ ಕಾರ್ಡ್ ಗಳಿವೆ ಎನ್ನಲಾಗಿದೆ. ಈ ಬಗ್ಗೆ ಸಿಎಂ ಬಿಎಸ್ ವೈ ಅವರೇ ಉಲ್ಲೇಖಿಸಿದ್ದಾರೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ ಪಡಿತರವನ್ನು ವಿತರಿಸಲಾಗಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಒಂದಿಷ್ಟು ಮಟ್ಟದಲ್ಲಿ ನಷ್ಟವಾಗಿದೆ. ಆದರೆ, ಇದನ್ನೇ ಮುಂದುವರೆಸುವ ಹಾಗಿಲ್ಲ. ಆದಾಯ, ಸರಕಾರದ ಬೊಕ್ಕಸವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿದವರ ವಿರುದ್ಧ ಕ್ರಮ ಅಗತ್ಯವಾಗಿದೆ.
ವಾಹನಗಳಿದ್ದವರು, ಸರಕಾರಿ ನೌಕರರು ಟಾರ್ಗೆಟ್:
ಇನ್ನು ಬಿಪಿಎಲ್ ಕಾರ್ಡ್ ಗೆ ಅರ್ಹತೆ ಇರುವವರೆಂದರೆ ಕಡುಬಡವರು. ಕೂಲಿ ಮಾಡಿ ಸಂಕಷ್ಟದ್ದಲ್ಲಿದ್ದು, ಜೀವನ ನಡೆಸುವವರು. ಆದರೆ, ಇಂದು ಅದನ್ನು ಹೊರತುಪಡಿಸಿ ಅನೇಕ ಮಂದಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಸರಕಾರ ಮುಂದಾಗಿದೆ. ಸ್ವಂತಕ್ಕೆ ವಾಹನ ಹೊಂದಿರುವವರು ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ ಅವರ ಕಾರ್ಡ್ ಅನರ್ಹಗೊಳ್ಳುತ್ತದೆ. ಹಾಗೂ ದಂಡ ವಿಧಿಸಲಾಗುತ್ತದೆ. ಸರಕಾರದ ನಿಯಮ ಪ್ರಕಾರ ದ್ವಿಚಕ್ರ ಸೇರಿದಂತೆ ಯಾವುದೇ ವಾಹನಗಳನ್ನು ಸ್ವಂತ ಉದ್ದೇಶಕ್ಕಾಗಿ ಹೊಂದಿರುವಂತಿಲ್ಲ.
ಇನ್ನು ಸರಕಾರದ ಯಾವುದೇ ಸೇವೆಯಲ್ಲಿದ್ದುಕೊಂಡು ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ ಕೂಡ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಎಷ್ಟೇ ಸಣ್ಣ ಉದ್ಯೋಗವಾಗಲಿ ಹಾಗೂ ದೊಡ್ಡ ಉದ್ಯೋಗವೇ ಆಗಲಿ ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ.