ಮೈಸೂರು, ಜೂ 06 (Daijiworld News/MSP): ಪ್ರಧಾನಮಂತ್ರಿಗಳು ಕೋವಿಡ್-19 ಮಹಾಮಾರಿಯನ್ನು ಎದುರಿಸಲು ಇಡೀ ದೇಶಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ 20 ಲಕ್ಷ ಕೋಟಿ ಪ್ಯಾಕೇಜ್ ನೀಡಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯಕ್ಕಾಗಿಯೇ 40 ಸಾವಿರ ಕೋಟಿ ರೂ. ಆರ್ಡಿಪಿಆರ್ ಮೂಲಕ ಕೊಡಲಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.
ಶುಕ್ರವಾರ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ಶಂಕರ ಮಠ ರಸ್ತೆಯಲ್ಲಿ "ಜನರೇ ಪ್ರೇರಕ, ನಾನು ಪ್ರಧಾನ ಸೇವಕ" ಎಂಬ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆಯ ಪ್ರತಿಯನ್ನು ಮನೆಮನೆಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಯಾವುದೇ ಒಂದು ಕೇಂದ್ರ ಸರ್ಕಾರದ ಯೋಜನೆ ಇದ್ದರೂ ಅದನ್ನು ಮೊದಲು ಕಾರ್ಯಾರಂಭ ಮಾಡುವುದು ಶಾಸಕರಾದ ರಾಮದಾಸ್ ಅವರು. ಅದೇ ರೀತಿ ನಾಳೆ ಶಾಸಕರಾದ ನಾಗೇಂದ್ರ ಅವರೂ ಸಹ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಶಾಸಕರಾದ ಎಸ್.ಎ.ರಾಮದಾಸ್ ಅವರು ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಇಂದು ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದು ಪ್ರತಿಯೊಬ್ಬ ನಾಗರಿಕರಿಗೂ ಮುಟ್ಟಬೇಕು. ಆ ಕೆಲಸವನ್ನು ನಮ್ಮ ಪಕ್ಷದ ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಾಡಲಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಾಸಕರಾದ ನಾಗೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.