ದಾವಣಗೆರೆ, ಜೂ 06 (Daijiworld News/MSP): ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಪದಗ್ರಹಣಕ್ಕೆ ರಾಜ್ಯ ಸರ್ಕರ ಅಡ್ಡಿಯಾಗಿಲ್ಲ, ನಿಯಮಾನುಸಾರ ಕಾರ್ಯಕ್ರಮ ಮಾಡಿಕೊಳ್ಳಲಿ, ಯಾರು ಬೇಡ ಎನ್ನುತ್ತಾರೆ. ಅವರು ಮೊದಲು ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಬಿಡಲಿ. ಆದರೆ ಅವರು ಡಿಕೆಶಿ ಸಿಎಂ ಆಗಬೇಕೆನ್ನುವ ಭ್ರಮಲೋಕದಲ್ಲಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವ್ಯಂಗ್ಯವಾಡಿದರು.
ಈ ಹಿಂದೆ ಸಿದ್ದರಾಮಯ್ಯ ತುಘಲಕ್ ದರ್ಬಾರ್ ನಡೆಸಿದ್ದರು. ಆದರೆ ನಮ್ಮ ಆಡಳಿತದಲ್ಲಿ ಆ ರೀತಿ ಮಾಡಿಲ್ಲ. ಅವರು ಬೇಕಿದ್ದರೆ ನಿಯಮಾನುಸಾರ ಯಾವುದೇ ಕಾರ್ಯಕ್ರಮ ಮಾಡಿಕೊಳ್ಳಲಿ ನಾವು ಅಡ್ಡಿಯಾಗಲ್ಲ ಆದರೆ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಇನ್ನು ಬಿಜೆಪಿಯಿಂದ ಮತ್ತೆ ಕಾಂಗ್ರೆಸ್ ಗೆ ರಿವರ್ಸ್ ಆಪರೇಷನ್ ಮಾಡುವ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಪಕ್ಷದಿಂದ ರಿವರ್ಸ್ ಆಪರೇಷನ್ ಆಗಲು ಸಾಧ್ಯವಿಲ್ಲ, ಒಂದು ವೇಳೆ ಬಿಜೆಪಿಯಿಂದ ರಿವರ್ಸ್ ಆಪರೇಷನ್ ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಇದನ್ನು ಡಿಕೆಶಿ ಸವಾಲಾಗಿ ಸ್ವೀಕರಿಸಲಿ ನೋಡೋಣ ಎಂದು ಡಿಕೆಶಿಗೆ ರೇಣುಕಾಚಾರ್ಯ ಬಹಿರಂಗ ಸವಾಲು ಹಾಕಿದರು.