ನವದೆಹಲಿ, ಜೂ. 06 (Daijiworld News/MB) : ಭಾರತವು ಪಾಕಿಸ್ತಾನವನ್ನು ಭಯೋತ್ಪಾದನೆಯ ಕೇಂದ್ರ ಎಂದು ಹೇಳಿದ್ದು ಅಮೆರಿಕದ ಬೆಂಬಲ ಮತ್ತು ಅನುಮೋದನೆ ನಿರ್ವಹಣಾ ತಂಡದ 11ನೇ ವರದಿಯನ್ನು ಭಾರತದ ವಿದೇಶಾಂಗ ಇಲಾಖೆ ತಪ್ಪಾಗಿ ನಿರೂಪಿಸಿದೆ ಎಂದು ಹೇಳಿರುವ ಪಾಕಿಸ್ತಾನಕ್ಕೆ "ಭಯೋತ್ಪಾದಕರು ಪಾಕಿಸ್ತಾನವನ್ನು ಇತರ ದೇಶಗಳ ಮೇಲೆ ದಾಳಿ ನಡೆಸಲು ಬಳಸಿದ್ದಾರೆ ಎಂಬುದನ್ನು ಅಲ್ಲಿನ ನಾಯಕರೇ ಒಪ್ಪಿಕೊಂಡಿದ್ದಾರೆ" ಎಂದು ಭಾರತ ತಿರುಗೇಟು ನೀಡಿದೆ.
ಈ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ್ ಪ್ರಕಟಣೆ ಹೊರಡಿಸಿದ್ದು, ಪಾಕಿಸ್ತಾನದ ಪ್ರಧಾನಿಯವರೇ ಕಳೆದ ವರ್ಷ ಪಾಕಿಸ್ತಾನದಲ್ಲಿ 30ರಿಂದ 40 ಸಾವಿರ ಭಯೋತ್ಪಾದಕರಿಗೆ ಆಶ್ರಯ ನೀಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರವಾಗಿದ್ದು ಇನ್ನಾದರೂ ಆತ್ಮಾವಲೋಕನ ಮಾಡಿ ಭಯೋತ್ಪಾದಕರಿಗೆ ಬೆಂಬಲಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆ ಕಳೆದ ತಿಂಗಳು ಹೊರಡಿಸಿದ್ದ ವರದಿಯಲ್ಲಿ, ಆಫ್ಘಾನಿಸ್ತಾನ, ಜೈಶ್ ಎ ಮೊಹಮ್ಮದ್ ಮತ್ತು ಲಷ್ಕರ್ -ಎ-ತೊಯ್ಬಾ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 6,500 ಭಯೋತ್ಪಾದಕರ ಪೈಕಿ ಹಲವರು ಪಾಕಿಸ್ತಾನದವರಾಗಿದ್ದು ಈ ಕಾರಣದಿಂದಾಗಿ ಇಂದು ಭಯೋತ್ಪಾದನೆಗೆ ಶಕ್ತಿ ದೊರೆತಿದೆ ಎಂದು ಹೇಳಿತ್ತು.