ಉತ್ತರಪ್ರದೇಶ, ಜೂ 06 (Daijiworld News/MSP): ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯೊಬ್ಬಳು ಏಕಕಾಲಕ್ಕೆ 25 ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನುಆಕೆಯ ಆದಾಯ ಕೇಳಿ ಸರ್ಕಾರಕ್ಕೆ ದಂಗುಬಡಿದು ತನಿಖೆಗೆ ಆದೇಶಿಸಿದೆ.
ಇಂತದೊಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಕೇವಲ 13 ತಿಂಗಳಲ್ಲಿ ರೂ.1 ಕೋಟಿ ವೇತನ ಪಡೆದಿರುವ ಶಿಕ್ಷಕಿ ವಿರುದ್ದ ಸದ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಆರೋಪಿ ಶಿಕ್ಷಕಿ ಮೈನ್ಪುರಿ ಮೂಲದ ಅನಾಮಿಕಾ ಶುಕ್ಲಾ ಎಂಬ ಕಸ್ತೂರಬಾ ಗಾಂಧಿ ಭಾಲಿಕಾ ವಿದ್ಯಾಲಯದ ರಾಯ್ ಬರೇಲಿ ಶಾಖೆಯ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದುಇದಲ್ಲದೆ ಆಕೆ ಅಕ್ಕ-ಪಕ್ಕದ ಜಿಲ್ಲೆಗಳಾದ ಅಮೇಠಿ, ರಾಯ್ಬರೇಲಿ, ಪ್ರಯಾಗ್ರಾಜ್, ಅಲಿಘರ್ ಸೇರಿದಂತೆ ಒಟ್ಟು 25 ಶಾಲೆಗಳಲ್ಲಿ ಕೆಲಸ ಮಾಡಿದ್ದಾಗಿ ರಿಜಸ್ಟರ್ ಆಗಿದೆ. ಕಳೆದ ಫೆಬ್ರವರಿವರೆಗೆ ಒಟ್ಟು 13 ತಿಂಗಳು ಇದೇ ರೀತಿ ಹಲವು ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಅನಾಮಿಕ ಶುಕ್ಲಾ ಸುಮಾರು 1 ಕೋಟಿ ರೂಪಾಯಿ ಸಂಪಾದಿಸಿದ್ದಾರೆ.
ರಾಜ್ಯ ಶಿಕ್ಷಣ ಇಲಾಖೆ ಡಿಜಿಟಲ್ ಡಾಟಾಬೇಸ್ ತಯಾರಿಸುವ ವೇಳೆ ಈ ಮಾಹಿತಿ ಬೆಳಕಿಗೆ ಬಂದಿದೆ. ಒಂದು ಶಾಲೆಯಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಇನ್ನೊಂದು ಶಾಲೆಯಲ್ಲಿ ಕೆಲಸ ಮಾಡಬಹುದು. ಆದ್ರೆ ಈಕೆ ಬರೊಬ್ಬರಿ ಏಕಕಾಲಕ್ಕೆ 25 ಶಾಲೆಗಳಲ್ಲಿ ಕೆಲಸ ಮಾಡಿದ ವಿಚಾರ ಗೊತ್ತಾಗ್ತಿದ್ದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದಂಗುಬಡಿದಂತಾಗಿದ್ದು ಹೀಗಾಗಿ ಆಕೆಗೆ ನೊಟೀಸ್ ನೀಡಲಾಗಿದ್ದು ಈ ಸಂಬಂಧ ತನಿಖೆಗೆ ಶಿಕ್ಷಣ ಇಲಾಖೆ ಆದೇಶಿಸಿದೆ. ಆದರೆ ಶಿಕ್ಷಕಿಯಿಂದ ಯಾವುದೇ ಉತ್ತರ ದೊರೆಯದೆ ಇದ್ದುದರಿಂದ, ಆಕೆಯ ಪತ್ತೆಗಾಗಿ ಬಲೆ ಬೀಸಲಾಗಿದೆ.
ಒಂದೇ ಬ್ಯಾಂಕ್ ಅಕೌಂಟ್ಗೆ ವಿವಿಧ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಿದ್ದಕ್ಕೆ ಸಂಬಂಧಪಟ್ಟ ಎಲ್ಲಾ ವೇತನ ಜಮೆ ಆಗಿದ್ದಾದರೂ ಹೇಗೆ ? ಮಾತ್ರವಲ್ಲದೆ ಇಲಾಖೆಯ ಅಧಿಕಾರಿಗಳ ತಪ್ಪು ಕಂಡುಬಂದರೂ ಅವರ ಮೇಲೂ ಕ್ರಮ ಜರುಗಿಸಲಾಗುತ್ತೆ ಎಂದು ಉತ್ತರಪ್ರದೇಶದ ಶಿಕ್ಷಣ ಸಚಿವ ಡಾ.ಸತೀಶ್ ದ್ವಿವೇದಿ ಹೇಳಿದ್ದಾರೆ.