ತಿರುವನಂತಪುರ, ಜೂ 06 (Daijiworld News/MSP): ಕೇರಳದ ತಿರುವನಂತಪುರಂನಲ್ಲಿ ಐದು ವರ್ಷದ ಪುಟ್ಟ ಕಂದನ ಮುಂದೆಯೇ ತಾಯಿಯನ್ನು ಸಿಗರೇಟಿನಲ್ಲಿ ಸುಟ್ಟು ಚಿತ್ರಹಿಂಸೆಗೆ ಒಳಪಡಿಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು,ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಆಕೆಯ ಪತಿ ಹಾಗೂ ಆತನ ನಾಲ್ವರು ಸ್ನೇಹಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ .
"ಬೀಚ್ ಗೆ ಕರೆದೊಯ್ಯುವುದಾಗಿ ಪತಿ ತಿಳಿಸಿ ನನ್ನನ್ನು ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ಪತಿ ಸ್ನೇಹಿತರಿಗೆ ತನ್ನ ಪತ್ನಿಯನ್ನು ಕರೆತರುವುದಾಗಿ ಮುಂಚಿತವಾಗಿ ಮಾಹಿತಿ ನೀಡಿದ್ದು, ಅವರೆಲ್ಲರೂ ಇದಕ್ಕಾಗಿ ಮದ್ಯದ ವ್ಯವಸ್ಥೆಯನ್ನು ಮಾಡಿದ್ದಾರೆ. ಮಗನೊಂದಿಗೆ ಇದ್ದಾಗ ಪತಿ ಸ್ನೇಹಿತರು ನನ್ನನ್ನು ಎಳೆದುಕೊಂಡು ಹೋಗಿದ್ದು, ಪುಟ್ಟ ಮಗನೆದುರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಾತ್ರವಲ್ಲದೆ ಮದ್ಯ ಕುಡಿಯುವಂತೆ ಒತ್ತಾಯಿಸಿದ್ದಾರೆ. ನನ್ನನ್ನು ವಾಹನದಲ್ಲಿ ಎಳೆದು ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ನಂತರ ವಿಪರೀತವಾಗಿ ಥಳಿಸಿದರು ನಾನು ಪ್ರಜ್ಞಾಹೀನಳಾದೆ. ನಂತರ ನನ್ನ ಮಗುವನ್ನು ಹೊಡೆಯಲಾಗಿದ್ದು ಮಗು ಅಳುವ ಶಬ್ದ ಕೇಳಿ ಪ್ರಜ್ಞೆ ಬಂದಿತು. ಆಗ ಮೈ ತುಂಬಾ ಸಿಗರೇಟ್ ನಿಂದ ಸುಟ್ಟ ಗಾಯಗಳಿದ್ದವು . ಅವರಿಗೆ ನನ್ನ ಮಗನನ್ನು ಮನೆಗೆ ಬಿಟ್ಟು ಖಂಡಿತ ನಾನು ಮರಳಿ ಬರುತ್ತೇನೆ ಎಂದು ಮಾತು ಕೊಟ್ಟ ಬಳಿಕ ಅಲ್ಲಿಂದ ತೆರಳಲು ಬಿಟ್ಟರು. ಮಗನೊಂದಿಗೆ ಓಡಿ ಬಂದು ಮುಖ್ಯ ರಸ್ತೆ ತಲುಪಿದೆ. ಅಲ್ಲಿಗೆ ಮೋಟರ್ ಸೈಕಲ್ನಲ್ಲಿ ಬಂದ ವ್ಯಕ್ತಿ ನಮ್ಮ ಕಾರು ತಲುಪಲು ಸಹಾಯ ಮಾಡಿದ್ದು ಕಾರಿನಲ್ಲಿದ್ದ ವ್ಯಕ್ತಿಯ ಸಹಾಯದಿಂದ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ವಿವರಿಸಿದ್ದಾರೆ.
" ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸಂತ್ರಸ್ತೆಯ ಪತಿ ಹಾಗೂ ಆತನ ನಾಲ್ವರು ಸ್ನೇಹಿತನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಪೈಕಿ ಕೆಲವರನ್ನು ಬೇರೆ ಅಪರಾಧಗಳಿಗಾಗಿ ಈ ಹಿಂದೆ ಬಂಧಿಸಲಾಗಿತ್ತು" ಎಂದು ತಿರುವನಂತಪುರದ ಗ್ರಾಮೀಣ ಎಸ್ಪಿ ಆಶೋಕ್ ವಿವರಿಸಿದ್ದಾರೆ.