ಬೆಂಗಳೂರು, ಜೂ. 06 (Daijiworld News/MB) : ಇತ್ತೀಚೆಗೆ ಅನಾರೋಗ್ಯದಿಂದ ವಿಧಿವಶರಾದ ಭೂಗತಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರು ಜೀವಿತಾವಧಿಯಲ್ಲಿ ಸಂಪಾದಿಸಿದ ಆಸ್ತಿ ಬಗ್ಗೆ 40 ಪುಟಗಳ ವಿಲ್ ಬರೆದಿಟ್ಟಿದ್ದು ಅದರಲ್ಲಿ ತನ್ನ ಮನೆಯಾಳು, ಗನ್ಮ್ಯಾನ್ಗಳು, ಡ್ರೈವರ್ ಸೇರಿ ಒಟ್ಟು 25 ಮಂದಿಗೂ ಆಸ್ತಿಯಲ್ಲಿ ಪಾಲು ನೀಡಿದ್ದಾರೆ ಎಂದು ಹೇಳಲಾಗಿದೆ.
ರೈ ಅವರು ಎರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಂಚಿಕೆ ಕುರಿತು ಸುಮಾರು 40 ಪುಟಗಳ ವಿಲ್ ಬರೆದಿದ್ದು ಇದರ ಬಗ್ಗೆ ಮಾಹಿತಿ ನೀಡಿರುವ ಅಡ್ವೋಕೇಟ್ ನಾರಾಯಣ ಸ್ವಾಮಿ, ರೈಯವರು ತಮ್ಮ ಎಲ್ಲಾ ಸ್ವಯಾರ್ಜಿತ ಆಸ್ತಿಯನ್ನು ಪುತ್ರರಾದ ರಾಖಿ ರೈ ಮತ್ತು ರಿಖಿ ರೈ ಅವರಿಗೆ ಸಮಾನವಾಗಿ ಹಂಚಿದ್ದಾರೆ. ಹಾಗೆಯೇ ಸುಮಾರು 15ವರ್ಷಗಳಿಂದ ರೈ ಮನೆಯಲ್ಲಿ ಮನೆ ಕೆಲಸ ಮಾಕೊಂಡಿದ್ದ, ತೋಟದ ಕೆಲಸ ಮಾಡಿಕೊಂಡಿದ್ದವರಿಗೂ ಒಂದು ಸೈಟ್ ನೀಡಬೇಕು ಎಂದು ವಿಲ್ನಲ್ಲಿ ಬರೆದಿದ್ದಾರೆ. ರೈ ಅವರ ಗನ್ಮ್ಯಾನ್ಗಳು, ಡ್ರೈವರ್ ಸೇರಿ ಒಟ್ಟು 25 ಮಂದಿ ಇದ್ದಿದ್ದು ಅವರೆಲ್ಲರಿಗೂ ಆಸ್ತಿಯಲ್ಲಿ ಪಾಲು ನೀಡಿದ್ದಾರೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ತಮ್ಮ ಎರಡನೇ ಪತ್ನಿ ಅನುರಾಧಗೆ ಆಸ್ತಿ ನೀಡಲಾಗಿದೆ, ಸಹಕಾರ ನಗರದಲ್ಲಿ ಮನೆ ಕಟ್ಟಿಸಿದ್ದು, ಒಂದು ಐಶಾರಾಮಿ ಕಾರು, ಚಿನ್ನಾಭರಣ ಮತ್ತು ಹಣ ನೀಡಿದ್ದಾರೆ ಎಂದು ವಿಲ್ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಅಷ್ಟು ಮಾತ್ರವಲ್ಲದೆಯೇ ವಿಲ್ನಲ್ಲಿ ಜಯ ಕರ್ನಾಟಕ ಸಂಘಟನೆಯನ್ನು ಯಾವುದೇ ತೊಂದರೆಯಿಲ್ಲದಂತೆ ಜಗದೀಶ್ ಮುನ್ನಡೆಸಿಕೊಂಡು ಹೋಗಬೇಕು. ತಮ್ಮ ಮಕ್ಕಳು ಕೂಡಾ ಸಂಘಟನೆ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಮುತ್ತಪ್ಪ ರೈ ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ರಾಮನಗರ ಸೇರಿದಂತೆ ದೇಶ, ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಸ್ಥಿರಾಸ್ತಿ ಹೊಂದಿದ್ದು ಅವರಿಗೆ ರಾಜ್ಯದ ವಿವಿಧೆಡೆ 600ಕ್ಕೂ ಅಧಿಕ ಎಕರೆ ಭೂಮಿ ಇದೆ ಎನ್ನಲಾಗಿದ್ದು ಆದರೆ ಈ ಬಹಿರಂಗವಾದ ವಿಲ್ ಬಗ್ಗೆ ಮುತ್ತಪ್ಪ ರೈ ಕುಟುಂಬಸ್ಥರು ದೃಢಪಡಿಸಿಲ್ಲ.