ಬೆಂಗಳೂರು, ಜೂ 06 (Daijiworld News/MSP): ಕೊರೊನಾವೈರಸ್ ಸೋಂಕು ತಡೆಯಲು ನಾಲ್ಕು ಹಂತಗಳಲ್ಲಿ ಹೇರಲಾಗಿದ್ದ ಲಾಕ್ ಡೌನ್ ಅನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭವಾಗಿದ್ದುಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಹೋಟೆಲ್ ಗಳು, ರೆಸ್ಟೋರೆಂಟ್ ಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ. ಆದರೆ ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ಮುಖ್ಯಮಂತ್ರಿಗಳು ಪ್ರವಾಸೋದ್ಯಮ ಇಲಾಖೆಯು ಹೋಟೆಲ್ ಗಳು, ಆತಿಥ್ಯ ಘಟಕಗಳು ಮತ್ತು ಪ್ರವಾಸಿ ತಾಣಗಳನ್ನು ತೆರೆಯುವ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಕೈಪಿಡಿಯನ್ನು ಬಿಡುಗಡೆ ಮಾಡಿ ಈ ವಿಚಾರ ತಿಳಿಸಿದರು. ಹೊಸ ಮಾರ್ಗಸೂಚಿಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಗಳ ಬಳಕೆ, ಗ್ಲೌಸ್ ಬಳಕೆ ಮಾಡಬೇಕು ಹಾಗೂ ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇವುದರ ಜೊತೆಗೆ ಇತರ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸಿಎಂ ಸೂಚಿಸಿದರು.
ಇದೇ ವೇಳೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ಹೋಟೆಲ್ ಗಳ ಸಂಘದ ಪ್ರತಿನಿಧಿಗಳು ಸಾರಿಗೆ ಕಂಪೆನಿಗಳ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು. ಈ ಸಂದರ್ಭ ಬಸ್ ಮಾಲಕರ ಸಂಘ ಹೋಟೆಲ್ ಮಾಲೀಕರ ಸಂಘ ಹಾಗು ಟ್ಯಾಕ್ಸಿ ಮಾಲಿಕರ ಸಂಘಗಳ ನಿಯೋಗವು ಸರ್ಕಾರದ ಮುಂದೆ ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದು ಅವೆಲ್ಲವನ್ನು ಪರಿಶೀಲಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.