ಲಕ್ನೋ, ಜೂ 06 (DaijiworldNews/PY) : ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದ ಬರಾಬಂಕಿ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತಪಟ್ಟವರನ್ನು ವಿವೇಕ್ ಶುಕ್ಲಾ (38), ಪತ್ನಿ ಅನಾಮಿಕಾ (35) ಇವರ ಮಕ್ಕಳಾದ ಬಾಬಲ್ (5), ರಿತು (7) ಹಾಗೂ ಕವನ (10) ಎಂದು ಗುರುತಿಸಲಾಗಿದೆ.
ಪತ್ನಿ, ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಮೊದಲಿಗೆ ಹತ್ಯೆ ಮಾಡಿದ್ದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಯ ಹಾಗೂ ಮಕ್ಕಳ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಕಾರಣ, ವ್ಯಕ್ತಿಯು ತನ್ನ ಪತ್ನಿ ಹಾಗೂ ಮಕ್ಕಳನ್ನು ಎರಡು-ಮೂರು ದಿನಗಳ ಹಿಂದೆ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಒಂದು ದಿನದ ಹಿಂದೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬೇಕು. ಸ್ಥಳದಲ್ಲಿದ್ದ ಕಬ್ಬಿಣದ ರಾಡ್ ಹಾಗೂ ರಕ್ತವಾಗಿದ್ದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.
ವಿವೇಕ್ನ ಪೋಷಕರು ಆತನ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದರು. ತಾಯಿ ಟೆರೇಸ್ನಲ್ಲಿದ್ದ ಸಂದಲರ್ಭ ಮಗ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದನ್ನು ಗಮನಿಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಆಕೆ ತನ್ನ ಪತಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.
ತನ್ನ ಸೊಸೆ, ಮೊಮ್ಮಕ್ಕಳು ಎಲ್ಲೋ ಹೋಗಿದ್ದ ಸಂದರ್ಭ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದರು. ಮಾಹಿತಿ ತಿಳಿದು ಮನೆಗೆ ಬಂದ ಪೊಲೀಸರು ತನಿಖೆ ನಡೆಸಿದ್ದು, ಆ ಸಂದರ್ಭ ಪತ್ನಿ ಹಾಗೂ ಮೂವರು ಮಕ್ಕಳ ಮೃತದೇಹ ಕೂಡಾ ಪತ್ತೆಯಾಗಿವೆ.
ವ್ಯಕ್ತಿ ಡೆತ್ನೋಟಿನಲ್ಲಿ ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾನೆ. ವ್ಯಕ್ತಿಯು ಸಾಲದಿಂದಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಈ ಬಗ್ಗೆ ನಡೆಯುತ್ತಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಐಜಿ ಸಂಜೀವ್ ಗುಪ್ತಾ ತಿಳಿಸಿದ್ದಾರೆ.