ಚಿಕ್ಕಮಗಳೂರು, ಜೂ. 06 (Daijiworld News/MB) : ಇತ್ತೀಚೆಗೆ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ದೃಢಪಟ್ಟ 16 ಕೊರೊನಾ ಸೋಂಕಿತರ ಪೈಕಿ ಎಲ್ಲಾ ಕೊರೊನಾ ಸೋಂಕಿತರು ಗುಣಮುಖರಾಗಿದ್ದು ಚಿಕ್ಕಮಗಳೂರು ಜಿಲ್ಲೆ ಈಗ ಕೊರೊನಾ ಮುಕ್ತ ಜಿಲ್ಲೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಒಟ್ಟು 18 ಸೋಂಕು ಪ್ರಕರಣಗಳ ಪೈಕಿ ಇಬ್ಬರಿಗೆ ತಪ್ಪಾಗಿ ಪಾಸಿಟಿವ್ ಬಂದಿದೆ. ಕಳೆದ ವಾರ 16 ಮಂದಿ ಸೋಂಕಿತರ ಪೈಕಿ 8 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇನ್ನುಳಿದವರು ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿಯವರು, "ಚಿಕ್ಕಮಗಳೂರು ಜಿಲ್ಲೆ ಕರೋನಾ ಮುಕ್ತವಾಗಿದೆ!!! ಇಷ್ಟು ದಿನ ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದಿದ್ದ ಕೊರೋನಾ ಸೋಂಕಿತರು ಕ್ವಾರಂಟೈನ್ನಲ್ಲಿ ಇದ್ದು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಹಕರಿಸಿ ಚಿಕಿತ್ಸೆ ಪಡೆದು, ಇಂದು ಗುಣಮುಖರಾಗಿ ಹೊರಬಂದಿದ್ದಾರೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು. ಕೋವಿಡ್ ವಿರುದ್ಧದ ನಮ್ಮ ಹೋರಾಟಕ್ಕೆ ಸಹಕರಿಸಿದ ಜಿಲ್ಲೆ ಸಮಸ್ತ ಜನತೆಗೂ ನನ್ನ ಧನ್ಯವಾದಗಳು" ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚೆಗೆ ವರದಿಯಾಗಿದ್ದ ಎಲ್ಲಾ 16 ಮಂದಿ ಸೋಂಕಿತರು ಹೊರರಾಜ್ಯಗಳಿಂದ ಬಂದವರಾಗಿದ್ದು, ಈ ಪೈಕಿ ನಾಲ್ವರು 17 ವರ್ಷಕ್ಕಿಂತ ಸಣ್ಣ ವಯಸ್ಸಿನವರಾಗಿದ್ದರು.