ಬಳ್ಳಾರಿ, ಜೂ. 06 (Daijiworld News/MB) : ಎಷ್ಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣವನ್ನು ಪ್ರಾರಂಭಿಸಬೇಕು ಎಂದು ಸೋಮವಾರ ಆದೇಶ ಹೊರಡಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ನಗರದಲ್ಲಿ ಶನಿವಾರ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನ್ಲೈನ್ ಶಿಕ್ಷಣ ಎಲ್ಕೆಜಿ. ಯುಕೆಜಿ ಮಕ್ಕಳಿಗೆ ಸರಿಯಲ್ಲ. ಹಾಗಾಗಿ ಇನ್ನು ಯಾವೆಲ್ಲಾ ತರಗತಿಗೆ ಆನ್ಲೈನ್ ಶಿಕ್ಷಣ, ಯಾವ ರೀತಿ, ಎಷ್ಟು ಹೊತ್ತು ನಡೆಸಬೇಕು ಎಂದು ಪರಾಮರ್ಶಿಸಲಾಗಿದ್ದು ಈ ಬಗ್ಗೆ ಸೋಮವಾರ ಆದೇಶ ನೀಡಲಾಗುತ್ತದೆ. ಆಟವಾಡುವ ವಯಸ್ಸಿನ ಸಣ್ಣ ಮಕ್ಕಳಾದ ಕಾರಣ ಎಲ್ಕೆಜಿ, ಯುಕೆಜಿ ಹಂತದಲ್ಲಿ ಆನ್ಲೈನ್ ಶಿಕ್ಷಣ ಬೇಡ ಎಂಬುದು ಹಲವರು ಪೋಷಕರ ಅಭಿಪ್ರಾಯ. ಅದಕ್ಕಾಗಿ ಅವರಿಗೆ ಆನ್ಲೈನ್ ಶಿಕ್ಷಣವಿಲ್ಲ ಎಂದು ಹೇಳಿದರು.
ಇನ್ನು ಆನ್ಲೈನ್ ಶಿಕ್ಷಣ ನಡೆಸಬೇಕಾದರೆ ಮಕ್ಕಳಿಗೆ ಅದಕ್ಕೆ ಬೇಕಾದ ಸೌಲಭ್ಯವಿದೆಯೇ ಎಂದು ಸಮೀಕ್ಷೆ ನಡೆಸಲಾಗುತ್ತಿದ್ದು 48 ಲಕ್ಷ ಮಕ್ಕಳ ಪೈಕಿ 26 ಲಕ್ಷ ಮಂದಿಯ ಮನೆಯಲ್ಲಿ ಮಾತ್ರ ಆಂಡ್ರಾಯ್ಡ್ ಫೋನ್ಗಳಿವೆ ಎಂದು ಕೂಡಾ ಹೇಳಿದರು.
ಶಾಲೆ ಆರಂಭ ಮಾಡುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪ್ರತಿ ಶಾಲೆಯಲ್ಲೂ ಪೋಷಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ ಅದನ್ನು ಶಿಕ್ಷಣಾಧಿಕಾರಿ ಮಟ್ಟದಲ್ಲಿ ಕ್ರೋಢೀಕರಿಸಬೇಕು. ಬಳಿಕ ಸಮಗ್ರ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು ಎಸ್ಎಸ್ಎಲ್ಸಿ ಪರೀಕ್ಷೆಗೆ ಎಲ್ಲಾ ಸಿದ್ಧತೆ ನಡೆಸಲಾಗುತ್ತಿದ್ದು ಎಲ್ಲರಿಗೂ ಕನಿಷ್ಠ ಎರಡು ಮಾಸ್ಕ್ಗಳನ್ನು ಉಚಿತವಾಗಿ ನೀಡಲಾಗುವುದು. ಹಾಗೆಯೇ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಲ್ಲಿ ಜ್ವರ, ಕೆಮ್ಮಿನಂಥ ಅನಾರೋಗ್ಯ ಕಂಡುಬಂದರೆ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಎಲ್ಲ ವಿದ್ಯಾರ್ಥಿಗಳಿಗೂ ಅವರಿರುವ ಹಳ್ಳಿ, ಪಟ್ಟಣದಿಂದ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಇನ್ನು ಆನಾರೋಗ್ಯದ ಕಾರಣದಿಂದಾಗಿ ಪರೀಕ್ಷೆಗೆ ಹಾಜರಾಗದಿದ್ದಲ್ಲಿ ಅವರು ಮರು ಪರೀಕ್ಷೆಗೆ ಹಾಜರಾಗಬಹುದು. ಅವರನ್ನು ಆಗಲೂ ಮೊದಲ ಅಭ್ಯರ್ಥಿಯಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.