ಬೆಂಗಳೂರು, ಜೂ. 06 (Daijiworld News/MB) : ನಾಲ್ಕೈದು ತಿಂಗಳು ಶಾಲಾ ಕಾಲೇಜು ಪ್ರಾರಂಭಿಸುವುದು ಬೇಡ ಎಂದು ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಮನವಿ ಮಾಡಿದರು.
ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಕ್ಡೌನ್ ತೆರವು ಮಾಡಿದ ಕಾರಣ ಸೋಂಕು ಹರಡುವಿಕೆ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು ಈ ವೇಳೆ ಶಾಲೆ ಆರಂಭ ಸರಿಯಲ್ಲ. ವಿದೇಶಗಳಲ್ಲಿ ಶಾಲೆ ತೆರೆದ ಕಾರಣ ಮಕ್ಕಳಿಗೆ ಕೊರೊನಾ ಹರಡಿದೆ. ಆನ್ಲೈನ್ ಶಿಕ್ಷಣವನ್ನೂ ನಾನು ವಿರೋಧಿಸುತ್ತೇನೆ. ಇದರಿಂದಾಗಿ ಬಡ ಮಕ್ಕಳಿಗೆ ತೊಂದರೆಯುಂಟಾಗುತ್ತದೆ ಎಂದು ಹೇಳಿದರು.
ಸರ್ಕಾರ ಲಾಕ್ಡೌನ್ನ್ನು ಮುಂದುವರೆಸಬಹುದಿತ್ತು. ಆಗ ಸೋಂಕು ಹರಡುವಿಕೆ ಪ್ರಮಾಣ ಇಳಿಮುಖವಾಗುತ್ತಿತ್ತು. ಆದರೆ ಲಾಕ್ಡೌನ್ ಸಡಿಲ ಮಾಡಿದ ಪರಿಣಾಮ ಸೋಂಕು ಹೆಚ್ಚಾಗಿ ಹರಡುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಯಾವುದೇ ಸೂಚನೆ ನೀಡದೆಯೇ ಒಮ್ಮೆಲೇ ಲಾಕ್ಡೌನ್ ಹೇರಿದ್ದರಿಂದ ಜನರಿಗೆ ತೊಂದರೆ ಉಂಟಾಗಿದೆ. ಲಾಕ್ಡೌನ್ ಹೇರುವ ಮೊದಲೇ ಸರ್ಕಾರ ಜನರಿಗೆ ಸಹಾಯ ಹಸ್ತ ಚಾಚುವುದು ಮುಖ್ಯವಾಗಿತ್ತು. ಜನರಿಗೆ ಬೇಕಾದ ದಿನಸಿಯನ್ನು ವಿತರಿಸಿ ಲಾಕ್ಡೌನ್ ಮಾಡಿದ್ದಲ್ಲಿ ಯಾವುದೇ ತೊಂದರೆ ಉಂಟಾಗುತ್ತಿರಲಿಲ್ಲ. ಆದರೆ ಆಗ ಸುಮ್ಮನೆ ಕೂತ ಸರ್ಕಾರ ಈಗ ಹಂಚಲು ಮುಂದಾಗಿದ್ದಾರೆ ಎಂದು ಸರ್ಕಾರವನ್ನು ಟೀಕಿಸಿದರು.
ಬೆಂಗಳೂರಿನಲ್ಲಿ ಮಾತ್ರವೇ ಸುಮಾರು 40 ಲಕ್ಷ ಕಾರ್ಮಿಕರಿದ್ದು 5 ಕೆ.ಜಿ. ಅಕ್ಕಿ, 2 ಕೆ.ಜಿ ಗೋದಿ ನೀಡಿರುವುದೇ ಸರ್ಕಾರದ ಸಾಧನೆಯಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ಸೂಚನೆಯಂತೆ ನಾವು ಕಿಟ್ ವಿತರಿಸಿದ್ದೇವೆ. ಪಕ್ಷದ ವತಿಯಿಂದ ಒಟ್ಟು 10,14,480 ದಿನಸಿ ಕಿಟ್ ವಿತರಣೆ ಮಾಡಿದ್ದೇವೆ. 93,96,785 ಪಾಕೀಟು ಉಚಿತ ಆಹಾರ ವಿತರಿಸಿದ್ದೇವೆ. 5,85,600 ಮಾಸ್ಕ್, ಸ್ಯಾನಿಟೈಸರ್ ಹಂಚಿದ್ದೇವೆ. 11,648 ಅನಾರೋಗ್ಯ ಪೀಡಿತರಿಗೆ ಔಷಧ ಹಂಚಿದ್ದೇವೆ. 13,12,550 ಕುಟುಂಬಗಳಿಗೆ ತರಕಾರಿ ವಿತರಿಸಿದ್ದೇವೆ ಎಂದು ಹೇಳಿದರು.
ಇನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಿರುವ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ಗೆ ಬೆಂಬಲ ನೀಡುವ ಬಗ್ಗೆ ವರಿಷ್ಠರು ತೀರ್ಮಾನ ಮಾಡಿದ್ದಾರೆ. ಸಂಸತ್ನಲ್ಲಿ ದೇವೇಗೌಡರಂಥವರು ಇರಬೇಕು. ಆದರೆ ಖರ್ಗೆಯವರ ಹೆಸರಿಗೆ ವಿರೋಧವಿಲ್ಲ. ಖರ್ಗೆಯವರು ಉತ್ತಮ ಸಂಸದೀಯ ಪಟು. ರಾಜ್ಯ ಸಭೆಗೆ ಅವರ ಅನಿವಾರ್ಯತೆಯೂ ಇದೆ ಎಂದು ಹೇಳಿದರು.