ಚೆನ್ನೈ, ಜೂ 06 (DaijiworldNews/PY) : ತಮಿಳುನಾಡು ಸರ್ಕಾರ ಕೊರೊನಾ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿನ ದರಗಳನ್ನು ಶನಿವಾರ ನಿಗದಿಪಡಿಸಿದ್ದು, ಸರ್ಕಾರದ ಆದೇಶದಂತೆ, ಸಾಮಾನ್ಯ ವಾರ್ಡ್ಗಳಿಗಾಗಿ ಗ್ರೇಡ್ 1 ಹಾಗೂ ಗ್ರೇಡ್ 2 ಆಸ್ಪತ್ರೆಗಳು ಗರಿಷ್ಠ 7.500 ಹಾಗೂ ಗ್ರೇಡ್ 3 ಹಾಗೂ 4 ಆಸ್ಪತ್ರೆಗಳು 5 ಸಾವಿರ ರೂಪಾಯಿ ದರ ವಿಧಿಸಬಹುದಾಗಿದೆ.
ಸಾಂದರ್ಭಿಕ ಚಿತ್ರ
ಗ್ರೇಡ್ 1,2,3,4 ಸೇರಿದಂತೆ ಐಸಿಯುನಲ್ಲಿ ದಾಖಲಾಗಲು ಎಲ್ಲಾ ಆಸ್ಪತ್ರೆಗಳಲ್ಲಿ ಗರಿಷ್ಠ 15 ಸಾವಿರ ರೂ. ನಿಗದಿಪಡಿಸಲಾಗಿದೆ. ಇದಕ್ಕಿಂತ ಜಾಸ್ತಿ ದರವನ್ನು ವಿಧಿಸದಂತೆ ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಲಾಗಿದ್ದು, ಖಾಸಗಿ ಆಸ್ಪತ್ರೆಗಳಿಂದ ರೋಗಿಗಳ ಪಲಾಯನದ ಬಗ್ಗೆ ಮಾಧ್ಯಮಗಳ ವರದಿ ಹಾಗೂ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ರಾಜ್ಯ ಶಾಖೆಯ ಮನವಿ ಆಧಾರದ ಮೇಲೆ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ತಮಿಳುನಾಡು ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಲ್ಲದೇ, ಕೊರೊನಾ ಕೇರ್ ಸೆಂಟರ್ಗಳನ್ನು ಸ್ಥಾಪಿಸಲಾಗಿದೆ.
ಈಗಾಗಲೇ ಮುಖ್ಯಮಂತ್ರಿಗಳ ಆರೋಗ್ಯ ವಿಮಾ ಯೋಜನೆಯಡಿ ನೋಂದಾಯಿಸಿರುವ ಹಾಗೂ ಅರ್ಹ ಕುಟುಂಬಗಳಿಗೂ ಈಗ ಘೋಷಿಸಲಾಗಿರುವಂತೆ ಚಿಕಿತ್ಸೆ ದೊರೆಯಲಿದೆ.
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸಾಂಕ್ರಾಮಿಕ ರೋಗದ ಸಂದರ್ಭ ಜೊತೆಯಾಗಿ ಕಾರ್ಯನಿರ್ವಹಿಸುವಂತೆ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಈ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿನ ಕೊರೊನಾ ರೋಗಿಗಳ ಚಿಕಿತ್ಸೆಯು ಮುಖ್ಯಮಂತ್ರಿಗಳ ಆರೋಗ್ಯ ವಿಮಾ ಯೋಜನೆಯ ಅಡಿಯಲ್ಲಿತ್ತು.