ಲಕ್ನೋ, ಜೂ. 07 (DaijiworldNews/MB) : ಏಕಕಾಲಕ್ಕೆ 25 ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡಿ ಕೇವಲ 13 ತಿಂಗಳಲ್ಲಿ ರೂ.1 ಕೋಟಿ ವೇತನ ಪಡೆದಿರುವ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕಾಸ್ ಗಂಜ್ ಪ್ರಾಥಮಿಕ ಶಿಕ್ಷಣಾಧಿಕಾರಿ, "ಶಿಕ್ಷಕಿ ಅನಾಮಿಕ ಶುಕ್ಲಾ ಶನಿವಾರ ರಾಜೀನಾಮೆ ಪತ್ರ ಸಲ್ಲಿಸಿದ್ದು ಬಳಿಕ ಅವರನ್ನು ವಶಕ್ಕೆ ಪಡೆಯಲಾಯಿತು. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯು ಶಿಕ್ಷಕರಿಗಾಗಿ ಡಿಜಿಟಲ್ ಡಾಟಾಬೇಸ್ ಆರಂಭಿಸಿದ ಬಳಿಕ ಬಾಗ್ ಪತ್ ಜಿಲ್ಲೆಯ ಕೆಜಿಬಿವಿ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿದ್ದ ಅನಾಮಿಕ ಏಕಕಾಲಕ್ಕೆ 25 ಜಿಲ್ಲೆಗಳಲ್ಲಿ ಕೆಲಸ ಮಾಡಿ ಕೇವಲ 13 ತಿಂಗಳಲ್ಲಿ ರೂ.1 ಕೋಟಿ ವೇತನ ಪಡೆದಿರುವುದು ಬೆಳಕಿಗೆ ಬಂದಿತ್ತು.
ಒಂದು ಶಾಲೆಯಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಇನ್ನೊಂದು ಶಾಲೆಯಲ್ಲಿ ಕೆಲಸ ಮಾಡಬಹುದು. ಆದರೆ ಈಕೆ ಏಕಕಾಲಕ್ಕೆ ಬರೋಬ್ಬರಿ 25 ಶಾಲೆಗಳಲ್ಲಿ ಕೆಲಸ ಮಾಡಿದ ವಿಚಾರ ತಿಳಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದಂಗುಬಡಿದಂತಾಗಿದ್ದು ಆಕೆಗೆ ನೊಟೀಸ್ ನೀಡಲಾಗಿತ್ತು. ಈ ಸಂಬಂಧ ತನಿಖೆಗೆ ಶಿಕ್ಷಣ ಇಲಾಖೆ ಆದೇಶಿಸಲಾಗಿತ್ತು. ಆದರೆ ಶಿಕ್ಷಕಿಯಿಂದ ಯಾವುದೇ ಉತ್ತರ ದೊರೆಯದೆ ಇದ್ದುದರಿಂದ, ಆಕೆಯ ಪತ್ತೆಗಾಗಿ ಬಲೆ ಬೀಸಲಾಗಿತ್ತು. ಇದೀಗ ಶಿಕ್ಷಕಿಯನ್ನು ಬಂಧನ ಮಾಡಲಾಗಿದೆ.