ಕೋಲ್ಕತ್ತ, ಜೂ. 07 (DaijiworldNews/MB) : ಅಂಪನ್ ಚಂಡಮಾರುತದಿಂದಾಗಿ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಕೇಂದ್ರ ಸರ್ಕಾರದ ಅಂತರ ಸಚಿವಾಲಯ ಸಮಿತಿಗೆ ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ.
ಚಂಡಮಾರುತದಿಂದ ಉಂಟಾಗಿರುವ ಹಾನಿಯ ಬಗ್ಗೆ ಕೇಂದ್ರ ಸರ್ಕಾರದ ಅಂತರ ಸಚಿವಾಲಯ ಸಮಿತಿಯು ಪಶ್ಚಿಮ ಬಂಗಾಳದಲ್ಲಿ ಎರಡು ದಿನಗಳ ಸಮೀಕ್ಷೆ ಕೈಗೊಂಡಿದ್ದು ಚಂಡಮಾರುತದಿಂದಾಗಿ ₹1,02,442 ಕೋಟಿ ನಷ್ಟವಾಗಿದ್ದು ಈ ಪೈಕಿ ಮನೆಗಳಿಗೆ ಆದ ಹಾನಿಯಿಂದಲೇ ಗರಿಷ್ಠ, ಅಂದರೆ ₹ 28.56 ಕೋಟಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೂ ಸೇರಿದಂತೆ ಕೈಗಾರಿಕಾ ವಲಯಕ್ಕೆ ₹26,790 ಕೋಟಿ, ಕೃಷಿ ಕ್ಷೇತ್ರಕ್ಕೆ ₹15,860 ಕೋಟಿ, ಮೀನುಗಾರಿಕೆಗೆ ₹2,000 ಕೋಟಿ, ತೋಟಗಾರಿಕೆಗೆ ₹6,581 ಕೋಟಿ, ಪ್ರಾಣಿ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ₹452 ಕೋಟಿ, ನಗರ ಮೂಲಸೌಕರ್ಯ ಕ್ಷೇತ್ರಕ್ಕೆ ₹6,750 ಕೋಟಿ ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರವು ಕೇಂದ್ರದ ;ಸಮಿತಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಪಶ್ಚಿಮ ಬಂಗಾಳ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಕೇಂದ್ರದ ತಂಡಕ್ಕೆ ನಷ್ಟದ ಮೌಲ್ಯಮಾಪನದ ಪಟ್ಟಿಯನ್ನು ನೀಡಲಾಗಿದ್ದು ನಮ್ಮ ಅಭಿಪ್ರಾಯಗಳನ್ನು ತಿಳಿಸಿ ತುರ್ತು ನೆರವು ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.