ಬೆಂಗಳೂರು, ಜೂ. 07 (DaijiworldNews/MB) : ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ) ಕಾಯ್ದೆಯನ್ವಯ ಆದಾಯ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ 2019ರ ಡಿಸೆಂಬರ್ ತಿಂಗಳಿನಿಂದ 2020ರ ಫೆಬ್ರವರಿ ತಿಂಗಳವರೆಗಿನ ಮೂರು ತಿಂಗಳ ಬಾಕಿ ಮೊತ್ತ ರೂ.4,313 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಈ ಬಗ್ಗೆ ತಿಳಿಸಿರುವ ರಾಜ್ಯದ ಗೃಹ ಸಚಿವರೂ ಆಗಿರುವ ಜಿಎಸ್ಟಿ ಸಮಿತಿ ಸದಸ್ಯ ಬಸವರಾಜ ಬೊಮ್ಮಾಯಿ ಅವರು, ಜಿಎಸ್ಟಿ ಬಾಕಿ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಮನವಿ ಮಾಡಿದ್ದರು. ಈಗ ಫೆಬ್ರವರಿವರೆಗಿನ ಮೂರು ತಿಂಗಳ ಅವಧಿಯ ಜಿಎಸ್ಟಿ ಬಾಕಿ ಹಣ ಬಿಡುಗಡೆಯಾಗಿದ್ದು ಇನ್ನು ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಜಿಎಸ್ಟಿ ರೂ.1800 ಕೋಟಿ ಬರಬೇಕಾಗಿದೆ. ಅದು ಜುಲೈ ತಿಂಗಳ್ಲಿ ಬರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಇನ್ನು ಜಿಎಸ್ಟಿ ಹೊರತಾಗಿ 15ನೇ ಹಣಕಾಸು ಆಯೋಗವು ಈ ಹಿಂದೆ ಶಿಫಾರಸು ಮಾಡಿದ್ದ ವಿಶೇಷ ಅನುದಾನದಲ್ಲಿಯೂ ಸಹ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ರೂ.5,495 ಕೋಟಿ ಬರಬೇಕಾಗಿದ್ದು ಈ ಹಣ ಬಿಡುಗಡೆಗೆ ನಿರೀಕ್ಷಿಸಲಾಗಿದ್ದು ಈ ಬಗ್ಗೆಯೂ ಸಿಎಂ ಯಡಿಯೂರಪ್ಪ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ.