ಬೆಂಗಳೂರು, ಜೂ 07 (DaijiworldNews/PY) : ಕೊರೊನಾ ವೈರಸ್ ವ್ಯಾಪಿಸುವುದನ್ನು ನಿಯಂತ್ರಿಸುವ ಸಲುವಾಗಿ ಲಾಕ್ಡೌನ್ ಘೋಷಣೆ ಮಾಡಿದ್ದ ಕಾರಣ ಎರಡು ತಿಂಗಳಿನಿಂದ ಭಕ್ತರಿಗೆ ಮಠ-ಮಂದಿರಗಳಲ್ಲಿ ಪ್ರವೇಶ ನಿಷೇಧಿಸಲಾಗಿತ್ತು. ಆದರೆ, ಈಗ ಸರ್ಕಾರದ ಆದೇಶದ ಅನ್ವಯ ದೇವಾಲಯಗಳನ್ನು ಜೂ 8ರಿಂದ ತೆರೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ, ಕೆಲವು ದೇವಾಲಯಗಳನ್ನು ಹೊರತುಪಡಿಸಿ, ಉಳಿದ ದೇವಾಲಯಗಳು ತೆರೆಯಲಿವೆ.
ಈಗಾಗಲೇ ದೇವಸ್ಥಾನ ಸ್ವಚ್ಛತೆ, ಸ್ಯಾನಿಟೈಸರ್ ಸಿಂಪಡಣೆ, ಭಕ್ತರು ಸಾಮಾಜಿಕ ಅಂತರದಲ್ಲಿ ಪ್ರವೇಶ ಮಾಡಲು ಬಾಕ್ಸ್ಗಳ ನಿರ್ಮಾಣ, ಬ್ಯಾರಿಕೇಡ್ ಅಳವಡಿಕೆ ಹಾಗೂ ಇನ್ನು ಇತರ ವ್ಯವಸ್ಥೆಗಳನ್ನು ಸಿದ್ದ ಮಾಡಿಕೊಳ್ಳುತ್ತಿವೆ.
ಈ ಮಧ್ಯೆ, ದೇವಾಲಯದ ಆಡಳಿತ ಮಂಡಳಿಯ ಅಧಿಕಾರಿಗಳು, ದೇವಾಲಯಕ್ಕೆ 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ದೇವಾಲಯಕ್ಕೆ ಬರುವ ಭಕ್ತರು ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸಬೇಕು. ದೇವಸ್ಥಾನದ ಸಿಬ್ಬಂದಿಗಳು ಕೆಲವು ಕಡೆ ಆರೋಗ್ಯ ತಪಾಸಣೆ ಮಾಡಲಿದ್ದಾರೆ.
ನಂಜನಗೂಡು ದೇವಾಲಯದ ಆಡಳಿತ ಮಂಡಳಿಯ ಅಧಿಕಾರಿಗಳು ಮಾತನಾಡಿ, ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಅರ್ಚಕರು ಹಾಗೂ ಸಿಬ್ಬಂದಿಗಳನ್ನು ತಪಾಸಣೆ ಮಾಡಲಾಗಿದೆ. ಈಗಾಗಲೇ ತಾಲೂಕು ಆರೋಗ್ಯಾಧಿಕಾರಿಗಳು 250 ಸಿಬ್ಬಂದಿಗಳನ್ನು ಹಾಗೂ ಅರ್ಚಕರನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ದೇವಾಲಯವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ದೇವಾಲಯ ಮುಖ್ಯಸ್ಥರಾದ ಡಾ.ಶಶಿಶೇಖರ್ ದೀಕ್ಷಿತ್ ಮಾತನಾಡಿ, ಸರ್ಕಾರ ಹಾಗೂ ಜಿಲ್ಲಾಡಳಿತ ಮಂಡಳಿಯ ಮಾರ್ಗಸೂಚಿಯಂತೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ದೇವಾಲಯಕ್ಕೆ ಒಂದು ಬಾರಿಗೆ ಕೇವಲ 20 ಭಕ್ತರಿಗಷ್ಟೇ ಅವಕಾಶ. ಪೂಜೆ ಅವಕಾಶವಿಲ್ಲ ಎಂದಿದ್ದಾರೆ.