ಅಹಮದಾಬಾದ್, ಜೂ 07 (DaijiworldNews/PY) : ಮೂವರು ಶಾಸಕರು ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ಪಕ್ಷವು ಆತಂಕಕ್ಕೊಳಗಾಗಿದ್ದು, ಆಪರೇಷನ್ ತಡೆಯಲು ತನ್ನ ಶಾಸಕರನ್ನು ರೆಸಾರ್ಟ್ ಹಾಗೂ ಬಂಗಲೆಗಳಿಗೆ ರವಾನಿಸಿದೆ. ಜೂನ್ 19ರಂದು ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಚುನಾವಣೆ ಆರಂಭಕ್ಕೂ ಮುನ್ನ ಕೆಲವು ರಾಜಕೀಯ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷಕ್ಕೆ ಆತಂಕ ಉಂಟುಮಾಡಿದೆ.
ಅಕ್ಷಯ್ ಪಟೇಲ್ ಹಾಗೂ ಜಿತು ಚೌಧರಿ ಜೂನ್ 3ರಂದು, ಜೂನ್ 5ರಂದು ಬ್ರಿಜೇಶ್ ಮೆರ್ಜಾ ರಾಜೀನಾಮೆ ನೀಡಿದ್ದರು. 182 ಸದಸ್ಯ ಬಲವನ್ನು ಹೊಂದಿದ್ದ ಗುಜರಾತ್ ವಿಧಾನಸಭೆಯಲ್ಲಿ ಈಗ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳ ಸಂಖ್ಯೆ 65ಕ್ಕೆ ಇಳಿದಿದೆ. ಅಲ್ಲದೇ, 10 ಸ್ಥಾನಗಳು ಖಾಲಿ ಉಳಿದಿರುವ ಕಾರಣದಿಂದ ಸದನದಲ್ಲಿ ಒಟ್ಟು ಸಂಖ್ಯೆಯೂ ಈಗ ಈಗ 172ಕ್ಕೆ ಇಳಿದಿದೆ.
ತಮ್ಮ ಕೆಲಸಗಳು ಮುಗಿದ ನಂತರ ಶನಿವಾರ ರೆಸಾರ್ಟ್ಗಳಿಗೆ ಬರಬೇಕು ಎಂದು ಪಕ್ಷದ ಹೈಕಮಾಂಡ್ ಆದೇಶ ಮಾಡಿತ್ತು. ಹಲವರು ಈಗಾಗಲೇ ರೆಸಾರ್ಟ್ಗಳನ್ನು ತಲುಪಿದ್ದಾರೆ. ಉಳಿದರು ಕೂಡಲೇ ರೆಸಾರ್ಟ್ ತಲುಪಲಿದ್ದಾರೆ. ಅಲ್ಲಿ ಪಕ್ಷದ ಹಿರಿಯ ನಾಯಕರು ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್ ಸಮಿತಿಯ ವಕ್ತಾರ ಮನೀಶ್ ದೋಷಿ ತಿಳಿಸಿದ್ದಾರೆ.
ಬನಸ್ಕಾಂತಾ ಜಿಲ್ಲೆಯ ಅಂಬಾಜಿ ಸಮೀಪದ ರೆಸಾರ್ಟ್ಗೆ ಉತ್ತರ ಗುಜರಾತ್ನ ಕೆಲ ಶಾಸಕರನ್ನು ಕರೆದೊಯ್ಯಲಾಗಿದೆ. ಆನಂದ್ ನಗರದ ಸಮೀಪವಿರುವ ಬಂಗಲೆಗಳಲ್ಲಿ ದಕ್ಷಿಣ ಮತ್ತು ಮಧ್ಯ ಗುಜರಾತ್ನ ಶಾಸಕರನ್ನು ಇರಿಸಲಾಗಿದೆ. ರಾಜಕೋಟ್ ಸಮೀಪದ ರೆಸಾರ್ಟ್ಗೆ ಸೌರಾಷ್ಟ್ರದ ಶಾಸಕರನ್ನು ಕರೆದೊಯ್ಯಲಾಗಿದೆ ಎಂದು ಮನೀಶ್ ಹೇಳಿದ್ದಾರೆ.
ಗುಜರಾತ್ ರಾಜ್ಯದಿಂದ ಬಾಕಿಯಿರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ. ಅಲ್ಲಿಯ ತನಕ ಶಾಸಕರು ರೆಸಾರ್ಟ್ಗಳಲ್ಲಿಯೇ ಇರಬೇಕು ಎಂದು ಹೇಳಿದರು.
ಬಿಜೆಪಿಯು ಸದನದಲ್ಲಿ 103 ಶಾಸಕರ ಬಲ ಹೊಂದಿದ್ದು, ಜೂನ್ 19ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಅಭಯ್ ಭಾರದ್ವಾಜ್, ರಾಮಿಲಾಬೆನ್ ಬಾರಾ ಹಾಗೂ ನರಹರಿ ಅಮಿನ್ ಸ್ಪರ್ಧಿಸಲಿದ್ದಾರೆ.