ಅಹಮದಾಬಾದ್, ಜೂ. 07 (DaijiworldNews/MB) : ಪಕ್ಷಾಂತರ ಪಕ್ಷಾಂತರ ಮಾಡಿದ ಶಾಸಕರನ್ನು ಜನರು ಚಪ್ಪಲಿಯಿಂದ ಹೊಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಪಕ್ಷಾಂತರ ಮಾಡಿದವರ ವಿರುದ್ಧ ಕಿಡಿಕಾರಿದ್ದಾರೆ.
ಗುಜರಾತಿನಲ್ಲಿ ರಾಜ್ಯಸಭಾ ಚುನಾವಣೆಗೂ ಮೊದಲು ಕೆಲವು ಶಾಸಕರು ಬಿಪೆಜಿಗೆ ಸೇರಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿಯು ಕುದುರೆ ವ್ಯಾಪಾರ ಮಾಡುತ್ತಿದ್ದು ಅದಕ್ಕಾಗಿ 140 ಕೋಟಿ ರೂ.ಗಳಿಂದ 150 ಕೋಟಿ ರೂ. ವ್ಯಯ ಮಾಡಿದ್ದಾರೆ. ಬದಲಾಗಿ ಅವರು ಈ ಹಣದಿಂದ ವೆಂಟಿಲೇಟರ್ ಖರೀದಿಸಿದ್ದರೆ ಕೆಲ ಜೀವಗಳನ್ನಾದರೂ ನಾವು ಉಳಿಸಬಹುದಿತ್ತು. ಹಣದ ದುರಾಸೆಯಿಂದ ಶಾಸಕರು ಜನರಿಗೆ ಮೋಸ ಮಾಡಿ ಬಿಜೆಪಿ ಸೇರಿದ್ದು ಅವರಿಗೆ ಜನರು ಮೆಟ್ಟಿನಿಂದ ಹೊಡೆಯಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆಗೂ ಮುನ್ನ ಅವರು ಯಾಕಾಗಿ ರಾಜೀನಾಮೆ ನೀಡುತ್ತಿದ್ದಾರೆ? ಎಂದು ಚುನಾವಣಾ ಆಯೋಗಕ್ಕೆ ತಿಳಿದಿದ್ದರೂ ಚುನಾವಣಾ ಆಯೋಗ ಮೌನ ಮುರಿಯುವುದಿಲ್ಲ ಎಂದು ದೂರಿದರು.
ಇನ್ನು ಬಿಜೆಪಿಯು ರಾಜ್ಯಸಭೆಯಲ್ಲಿ ಬಹುಮತ ಪಡೆಯುವ ಯತ್ನದಲ್ಲಿದ್ದು ನಾವು ಖಂಡಿತವಾಗಿ ಎರಡು ರಾಜ್ಯಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದರು.
ಗುಜರಾತಿನಲ್ಲಿ ಮೂವರು ಕಾಂಗ್ರೆಸ್ನ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಬಳಿಕ ಕಾಂಗ್ರೆಸ್ ತನ್ನ ಶಾಸಕರನ್ನು ರಾಜ್ಯ ಮತ್ತು ರಾಜಸ್ಥಾನದ ವಿವಿಧ ರೆಸಾರ್ಟ್ಗಳಿಗೆ ಸ್ಥಳಾಂತರ ಮಾಡಿದೆ.