ನವದೆಹಲಿ, ಜೂ. 07 (DaijiworldNews/MB) : ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು ಈ ಕಾರಣದಿಂದಾಗಿ ಕೊರೊನಾಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳು ದೆಹಲಿ ಜನರಿಗಷ್ಟೇ ಮೀಸಲು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾನುವಾರ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರೀಯ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಚಿಕಿತ್ಸೆ ಲಭಿಸಲಿದೆ. ನರಶಸ್ತ್ರಚಿಕಿತ್ಸೆಯಂತಹ ವಿಶೇಷ ಶಸ್ತ್ರಚಿಕಿತ್ಸೆಗಳನ್ನು ಹೊರತುಪಡಿಸಿ ಕೆಲವು ಖಾಸಗಿ ಆಸ್ಪತ್ರೆಗಳು ಕೂಡಾ ದೆಹಲಿಗರಿಗೆ ಮಾತ್ರ ಮೀಸಲು ಎಂದು ಹೇಳಿದ್ದು ಜೂನ್ ಅಂತ್ಯದ ವೇಳೆಗೆ 15,000 ಹಾಸಿಗೆಗಳು ಬೇಕಾಗಬಹುದು ಎಂದೂ ಕೂಡಾ ಹೇಳಿದ್ದಾರೆ.
ದೆಹಲಿಯ ಎಲ್ಲಾ ಗಡಿಯನ್ನು ಸೋಮವಾರದಿಂದ ತೆರೆಯಲಿದ್ದು ರೆಸ್ಟೋರೆಂಟ್, ಮಾಲ್ ಹಾಗೂ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಮಾರ್ಗಸೂಚಿಗಳೊಂದಿಗೆ ಅವಕಾಶ ನೀಡಲಾಗಿದೆ. ಆದರೆ ಹೋಟೆಲ್, ಬ್ಯಾಂಕ್ವೆಟ್ ಹಾಲ್ಗಳು ಎಂದಿನಂತೆ ಬಂದ್ ಇರಲಿದೆ ಎಂದು ತಿಳಿಸಿದ್ದಾರೆ.