ಮುಂಬೈ, ಜೂ 07 (DaijiworldNews/PY) : ಸೋನು ಸೂದ್ ಹೆಸರಿನ ಮಹಾತ್ಮ ದಿಢೀರ್ ಅವತರಿಸಿದ್ದಾರೆ. ಇವರು ಮುಂಬೈನ ಸೆಲೆಬ್ರಿಟಿ ಮ್ಯಾನೇಜರ್ ಆಗುವ ಸಾಧ್ಯತೆಗಳಿವೆ ಎಂದು ಮಹಾರಾಷ್ಟ್ರದ ಆಡಳಿತ ಪಕ್ಷ ಶಿವಸೇನಾ ವ್ಯಂಗ್ಯವಾಡಿದೆ.
ಈ ಬಗ್ಗೆ ಪಕ್ಷದ ಮುಖವಾಣೆ ಸಾಮ್ನಾದ ಸಂಪಾದಕೀಯದಲ್ಲಿ ಪಕ್ಷದ ನಾಯಕ ಸಂಜಯ್ ರಾವತ್ ಉಲ್ಲೇಖ ಮಾಡಿದ್ದು, ಲಕ್ಷಾಂತರ ವಲಸೆ ಕಾರ್ಮಿಕರನ್ನು ಸೋನು ಸೂದ್ ಅವರು ಇತರ ರಾಜ್ಯಗಳಲ್ಲಿನ ಅವರ ಮನೆಗಳಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದ ರಾಜ್ಯಪಾಲರೂ ಮಹಾತ್ಮ ಸೂದ್ ಅವರ ಕೆಲಸಕ್ಕಾಗಿ ಅವರನ್ನು ಪ್ರಶಂಸಿಸಿದ್ದಾರೆ ಎಂದಿದ್ದಾರೆ.
ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋನು ಸೂದ್ ಅವರು ಭೇಟಿಯಾಗುವ ಹಾಗೂ ಮುಂಬೈನ ಸೆಲೆಬ್ರಿಟಿ ಮ್ಯಾನೇಜರ್ ಆಗುವಂತಹ ಎಲ್ಲಾ ಸಾಧ್ಯತೆಗಳು ಇವೆ ಎಂದು ರಾವತ್ ಟೀಕೆ ಮಾಡಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೂದ್ ಅವರ ಕೆಲಸದಿಂದ ಏನೂ ಮಾಡಿಲ್ಲ ಎಂದು ಬಿಂಬಿಸದಂತಾಗುತ್ತದೆ ಎಂದು ಹೇಳಿರುವ ರಾವತ್ ಅವರು, ಈ ನಟನಿಗೆ ಈ ಲಾಕ್ಡೌನ್ ಸಂದರ್ಭ ಬಸ್ಸುಗಳ ಎಲ್ಲಿಂದ ದೊರೆತವು ಎಂದು ಕೇಳಿದ್ದಾರೆ.
ಸೋನು ಸೂದ್ ಅವರು ಮೇ 31ರಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾಗಿದ್ದು, ವಲಸೆ ಕಾರ್ಮಿಕರಿಗೆ ಅವರ ರಾಜ್ಯಗಳಿಗೆ ತೆರಳುವ ಸಲುವಾಗಿ ನೆರವಾಗಲು ತೆಗೆದುಕೊಂಡ ಕ್ರಮಗಳ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದರು. ಅಲ್ಲದೇ, ವಲಸೆ ಕಾರ್ಮಿಕರಿಗೆ ಪ್ರಯಾಣಕ್ಕೆ ವ್ಯವಸ್ಥೆ, ಆಹಾರ ಒದಗಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಇದಕ್ಕೆ ತಾವೂ ಸಂಪೂರ್ಣ ಸಹಕಾರ ನೀಡುವುದಾಗಿ ರಾಜ್ಯಪಾಲರು ಹೇಳಿದ್ದರು.
ರಾಜ್ಯಕ್ಕೆ ಮರಳಲು ಕರ್ನಾಟಕದ ವಲಸೆ ಕಾರ್ಮಿಕರಿಗೂ ಸೂದ್ ನೆರವಾಗಿದ್ದಾರೆ. ಸೋನು ಅವರು ಇತ್ತೀಚೆಗೆ ಕಲಬುರ್ಗಿಯ ಕಾರ್ಮಿಕರಿಗೆ ಊರಿಗೆ ಮರಳಲು ಬಸ್ಸುಗಳ ವ್ಯವಸ್ಥೆ ಮಾಡಿದ್ದಾರೆ. ಅದರೊಂದಿಗೆ ಈ ಕಾರ್ಮಿಕರಿಗಾಗಿ ಊಟದ ಕಿಟ್ನ ವ್ಯವಸ್ಥೆ ಕೂಡ ಮಾಡಿದ್ದಾರೆ.