ಭೋಪಾಲ್ , ಜೂ. 07 (DaijiworldNews/MB) : ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದ್ದ ಹುಲಿಯೊಂದನ್ನು ಇಲ್ಲಿನ ವನ್ವಿಹಾರ್ ರಾಷ್ಟ್ರೀಯ ಉದ್ಯಾನಕ್ಕೆ ಕರೆತರಲಾಗಿದ್ದು ಇದೀಗ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
2018ರ ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಸೆರೆಹಿಡಿಯಲಾದ ಸರನ್ ಹೆಸರಿನ ಹುಲಿಯ ಬಗ್ಗೆ ತಿಳಿಸಿರುವ ವನ್ವಿಹಾರ್ ರಾಷ್ಟ್ರೀಯ ಉದ್ಯಾನದ ಅಧಿಕಾರಿಯೊಬ್ಬರು, ನೆರೆಯ ಮಹಾರಾಷ್ಟ್ರದ ಜನವಸತಿ ಪ್ರದೇಶಕ್ಕೆ ಈ ಹುಲಿ ನುಗ್ಗಿದ್ದು ಗಡಿ ಜಿಲ್ಲೆ ಅಮರಾವತಿಯಲ್ಲಿ ಅಕ್ಟೋಬರ್ನಲ್ಲಿ ಇಬ್ಬರನ್ನು ಹತ್ಯೆ ಮಾಡಿತ್ತು. ಬಳಿಕ ಮಧ್ಯಪ್ರದೇಶದಲ್ಲಿದ್ದ ಈ ಹುಲಿ ಮತ್ತ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿತು. ಅದನ್ನು ಅಲ್ಲಿಂದ ರಕ್ಷಿಸಿ ಸಹಜ ಪರಿಸರಕ್ಕೆ ಹೊಂದಿಕೆಯಾಗಲಿ ಎಂದು ಸಾತ್ಪುರದ ಹುಲಿಸಂರಕ್ಷಿತ ಪ್ರದೇಶಕ್ಕೆ ಬಿಡಲಾಗಿತ್ತು. ಆದರೆ ಅದು ಪುನಃ ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ನುಗ್ಗಿತ್ತು. 2019ರಲ್ಲಿ ಅದನ್ನು ಕಾನ್ಹಾದ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಎನ್ಕ್ಲೋಷರ್ನಲ್ಲಿ ಬಿಡಲಾಗಿತ್ತು. ಹುಲಿಯನ್ನು ಪ್ರಕೃತಿಸಹಜ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುವ ಯತ್ನಗಳು ವಿಫಲವಾದ ಕಾರಣ ಶನಿವಾರ ಕಾನ್ಹಾದಿಂದ ವನ್ವಿಹಾರ್ ನ್ಯಾಷನಲ್ ಪಾರ್ಕ್ಗೆ ಕರೆತರಲಾಗಿದ್ದು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.