ಜಮ್ಮು, ಜೂ 07 (DaijiworldNews/PY) : ಜಮ್ಮು ಹಾಗೂ ಕಾಶ್ಮೀರ ಆಡಳಿತವು ಕೊರೊನಾ ಸೋಂಕು ಪ್ರಕರಣಗಳಿಗೆ ಸಂಬಂಧಪಟ್ಟಂತೆ ನೂತನವಾಗಿ ಜಿಲ್ಲೆಗಳ ವರ್ಗೀಕರಣ ಮಾಡಿದ್ದು, ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಕೆ ಮಾಡಿದ ಬಳಿಕ ಕೆಂಪು ವಲಯದ ಪಟ್ಟಿಯಿಂದ ಕಥುವಾ ಹಾಗೂ ಸಾಂಬಾ ಜಿಲ್ಲೆಗಳನ್ನು ಕೈಬಿಡಲಾಗಿದೆ. ಹಾಗೆಯೇ, ಹಸಿರು ವಲಯದ ಪಟ್ಟಿಯಿಂದ ಪೂಂಚ್ ಹಾಗೂ ರಾಜೌರಿ ಜಿಲ್ಲೆಗಳನ್ನು ಕೈಬಿಡಲಾಗಿದೆ.
ಸಾಂದರ್ಭಿಕ ಚಿತ್ರ
ಈಗ ಕಿತ್ತಳೆ ಬಣ್ಣದ ವಲಯದಲ್ಲಿ ಈ ನಾಲ್ಕು ಜಿಲ್ಲೆಗಳನ್ನು ಸೇರಿಸಲಾಗಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್.ಸುಬ್ರಹ್ಮಣ್ಯಂ ಅವರು ಆದೇಶ ಹೊರಡಿಸಿದ್ದಾರೆ.
ಲಾಕ್ಡೌನ್ ನಿಯಮಗಳ ಸಡಿಲಿಕೆಯ ಬಳಿಕ ವಾಸ್ತವ ಸ್ಥಿತಿಯನ್ನು ಪರಿಶೀಲನೆ ಮಾಡಿ ಈಗ ಹೊಸದಾಗಿ ಜಿಲ್ಲೆಗಳ ವರ್ಗೀಕರಣ ಮಾಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಅವರ ಹೇಳಿಕೆ ತಿಳಿಸಿದೆ.
ಗಂಡೇರ್ಬಾಲ್, ಬಂಡಿಪೊರಾ, ಜಮ್ಮು, ಉದಂಪುರ್, ಕತು, ಸಾಂಬಾ, ರೇಸಿ, ರಾಜೌರಿ ಜಿಲ್ಲೆಗಳು ಕಿತ್ತಳೆ ವಲಯದಲ್ಲಿದ್ದರೆ, ಹಸಿರು ವಲಯದಲ್ಲಿ ದೋಡ ಜಿಲ್ಲೆ ಮತ್ತು ಚೆನಾಬ್ ಕಣಿವೆ ಇವೆ.
ಈಗ ಜಮ್ಮು-ಕಾಶ್ಮೀರದಲ್ಲಿ ಶ್ರೀನಗರ, ಬುದಗಂ, ಅನಂತನಾಗ್, ಪುಲ್ವಾಮಾ, ಕುಲ್ಗಾಮ್, ಶೋಪಿಯಾನ್, ಬಾರಾಮುಲ್ಲಾ, ಕುಪ್ವಾರಾ ಹಾಗೂ ರಾಂಬಾನ್ ಜಿಲ್ಲೆಗಳು ಕೆಂಪು ವಲಯದಲ್ಲಿವೆ.
ಲಖನ್ಪುರ ಕೆಂಪು ವಲಯದಲ್ಲಿದ್ದು, 500 ಮೀಟರ್ ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈವರೆಗೆ ಜಮ್ಮು-ಕಾಶ್ಮೀರದಲ್ಲಿ 3,467 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 40 ಮಂದಿ ಸಾವನ್ನಪ್ಪಿದ್ದಾರೆ.