ಶಿವಮೊಗ್ಗ, ಜೂ 07 (DaijiworldNews/PY) : ಕಾಂಗ್ರೆಸ್ ಅವರ ಸದಸ್ಯರನ್ನೇ ಬಿಟ್ಟು ಅಧಿಕಾರ ಕಳೆದುಕೊಂಡರು. ಇನ್ನೂ ಜೆಡಿಎಸ್ ಮೇಲೆಳುವುದೇ ಕಷ್ಟವಾಗಿದೆ. ಇನ್ನೂ ಅವರು ಲಾಭ ಪಡೆದುಕೊಳ್ಳುತ್ತಾರೆ ಎಂದರೆ ಹಾಸ್ಯಾಸ್ಪದ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಸಚಿವ ಸ್ಥಾನಕ್ಕಾಗಿ ಅಸಮಾಧಾನವಿದೆ ಎನ್ನುವ ವಿಚಾರವನ್ನು ಒಪ್ಪಿಕೊಳ್ಳುತ್ತೇವೆ. ಬಿಜೆಪಿ ಪಕ್ಷವು ಒಂದು ಕುಟುಂಬದ ವ್ಯವಸ್ಥೆ ಇದ್ದಂತೆ. ತಮ್ಮ ಭಾವನೆಗಳನ್ನು ಕುಟುಂಬದವರು ಹೇಳಿಕೊಳ್ಳುತ್ತಿದ್ದಾರೆ. ಅಸಮಾಧಾನಿತರನ್ನೂ ಕರೆದು ಮಾತನಾಡುವ ಶಕ್ತಿ ಬಿಜೆಪಿಗೆ ಇದೆ. ಅವರನ್ನು ಕರೆದು ಮಾತನಾಡುತ್ತೇವೆ ಎಂದು ತಿಳಿಸಿದರು.
ಬಿಜೆಪಿಯ ಸಮಸ್ಯೆಗಳನ್ನು ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಿಎಂ ಬಿಎಸ್ವೈ ಅವರೇ ಕುಳಿತು ಬಗೆಹರಿಸುವ ವಿಶ್ವಾಸವಿದೆ ಎಂದರು.
ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಯಾರಿಗೆ ಸ್ಥಾನ ನೀಡಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನುವ ಪಟ್ಟಿಯನ್ನು ಕೋರ್ ಕಮಿಟಿಯಲ್ಲಿ ಮಾಡಲಾಗಿದೆ. ಕೇಂದ್ರಕ್ಕೂ ಈ ಪಟ್ಟಿಯನ್ನು ಕಳುಹಿಸಲಾಗಿದೆ. ಈ ಬಗ್ಗೆ ಕೇಂದ್ರದ ನಾಯಕರು ಏನು ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎನ್ನುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.