ಲಖನೌ, ಜೂ. 08 (DaijiworldNews/MB) : ಜೂನ್ 10ರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ವರದಿಯಾಗಿದೆ.
ಈ ಬಗ್ಗೆ ತಿಳಿಸಿರುವ ಟ್ರಸ್ಟ್ನ ಅಧ್ಯಕ್ಷ ನೃತ್ಯಗೋಪಾಲ್ ದಾಸ್ ಅವರ ಉತ್ತರಾಧಿಕಾರಿ ಮಹಾಂತ ಕಮಲನಯನ್ ದಾಸ್, ಲಂಕಾಧಿಪತಿ ರಾವಣನ ವಿರುದ್ಧ ಯುದ್ಧ ಆರಂಭಕ್ಕೂ ಮುನ್ನ ಶ್ರೀರಾಮ ರುದ್ರಾಭಿಷೇಕ ನೆರವೇರಿಸಿದ್ದ. ಅದರಂತೆ ರುದ್ರಾಭಿಷೇಕ ಸೇರಿದಂತೆ ಇತರ ಧಾರ್ಮಿಕ ವಿಧಿಗಳನ್ನು ನೆರವೇರಿಸಿದ ಬಳಿಕ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಈಗಾಗಲೇ ಮಂದಿರ ನಿರ್ಮಿಸುವ ಜಾಗವನ್ನು ಸಮತಟ್ಟು ಮಾಡುವ ಕಾರ್ಯ ಸಂಪೂರ್ಣವಾಗಿದೆ. ನಿರ್ಮಾಣ ಕಾರ್ಯದ ಗುತ್ತಿಗೆ ಪಡೆದಿರುವ ಸಂಸ್ಥೆಯೂ ಸಹ ಕಾಮಗಾರಿ ಆರಂಭಕ್ಕೆ ಸಿದ್ಧ ಎಂದು ತಿಳಿಸಿದೆ. ರಾಮ ಮಂದಿರದ ನಿರ್ಮಾಣದ ಸಂದರ್ಭ, ವಿಶ್ವ ಹಿಂದೂ ಪರಿಷತ್ನ ಕಾರ್ಯಾಗಾರದಲ್ಲಿ ಸಂಗ್ರಹಿಸಿ ಇಡಲಾಗಿರುವ ಕೆತ್ತನೆ ಮಾಡಿದ ಶಿಲೆಗಳನ್ನು ಕೂಡಾ ಬಳಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ದಿಗಂಬರ ಅಖಾಡ ಮುಖ್ಯಸ್ಥ ಮಹಾಂತ ಸುರೇಶ್ ದಾಸ್, ಬಿಜೆಪಿಯ ಮಾಜಿ ಸಂಸದ ರಾಮವಿಲಾಸ್ ವೇದಾಂತಿ ಅವರು ಸೇರಿದಂತೆ ಹಲವರು ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರು, ಸ್ವಾಮೀಜಿಗಳನ್ನು ಈಗ ಮೂಲೆಗುಂಪು ಮಾಡಲಾಗಿದೆ ಎಂದು ಆರೋಪಿಸಿದ್ದು ಇದಕ್ಕೆ ವಿಶ್ವ ಹಿಂದೂ ಪರಿಷತ್, ವಿರೋಧ ವ್ಯಕ್ತಪಡಿಸುತ್ತಿರುವವರನ್ನು ರಾವಣ ಎಂದು ಟೀಕೆ ಮಾಡಿದೆ.