ಬೆಂಗಳೂರು, ಜೂ 08 (DaijiworldNews/PY) : ನನ್ನ 48 ವರ್ಷಗಳ ರಾಜಕೀಯ ವೃತ್ತಿ ಬದುಕಿನಲ್ಲಿ ಇದೇ ಮೊದಲ ಸಲ ರಾಜ್ಯಸಭೆ ಪ್ರವೇಶಿಸುತ್ತಿದ್ದೇನೆ. ನನಗೆ ಈಗ ಸಿಕ್ಕಿರುವ ಸದವಕಾಶದಲ್ಲಿ ಸಾಧ್ಯವಾದಷ್ಟನ್ನು ಕಲಿತು ನನ್ನ ಕೈಯಿಂದಾದಷ್ಟು ರಾಜ್ಯದ ಜನತೆಗೆ ಸಹಾಯ ಮಾಡುತ್ತೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಲೋಕಸಭೆಯ ಮಾಜಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್, ಆಸ್ಕರ್ ಫೆರ್ನಾಂಡಿಸ್, ಜೈರಾಮ್ ರಮೇಶ್, ಆನಂದ್ ಶರ್ಮರಂತಹ ನಾಯಕರು ರಾಜ್ಯಸಭೆಯಲ್ಲಿ ಇದ್ದಾರೆ. ಅವರಿಂದ ಸಾಧ್ಯವಾದಷ್ಟನ್ನು ಕಲಿತು ಕರ್ನಾಟಕದ ಬಗ್ಗೆ ಹಾಗೂ ದೇಶದಲ್ಲಿರುವ ಹಲವು ವಿಚಾರಗಳ ಬಗ್ಗೆ ಮಾತನಾಡುತ್ತೇನೆ ಎಂದರು.
ಕೆಲವು ಪಕ್ಷಗಳ ನಾಯಕರು ನಾನು ಮತ್ತೆ ರಾಜಕೀಯ ಜೀವನದಲ್ಲಿ ಮುನ್ನೆಲೆಗೆ ಬರುವುದಿಲ್ಲ, ತೆರೆಮರೆಗೆ ಸರಿಯುತ್ತೇನೆ ಎಂದು ಸದನದಲ್ಲಿಯೇ ಬಹಿರಂಗವಾಗಿ ಹೇಳಿದ್ದರು. ಇಂದು ಅವರಿಗೆ ಉತ್ತರವಾಗಿ ನನ್ನ ಪಕ್ಷವು ನನ್ನನ್ನು ಸೂಚಿಸುವ ಮೂಲಕ ಉತ್ತರ ನೀಡುತ್ತಿದ್ದೇನೆ. ಈ ಹಿಂದೆ ನನಗೆ ಏನು ಮಾಡಿದ್ದಾರೆ ಎನ್ನುವ ಬಗ್ಗೆ ಈಗ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.
ಕೆಲವು ಪಕ್ಷಗಳ ನಾಯಕರ ಪಿತೂರಿಯಿಂದ ಕಳೆದ ಬಾರಿ ಗುಲ್ಬರ್ಗ ಲೋಕಸಭಾ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು ಎಂದು ಕೇಳಿಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಇದಕ್ಕಿಂತ ಮೊದಲು ನಾನು ಎಲ್ಲಾ ಚುನನಾವಣೆಗಳನ್ನು ಗೆದ್ದಿದ್ದೆನು, ನನಗೆ ಹಾಗೆ ಅನಿಸುವುದಿಲ್ಲ ಎಂದರು.