ಬೆಂಗಳೂರು, ಜೂ.08 (DaijiworldNews/MB) : ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಸಂದರ್ಭದಲ್ಲಿ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ಮೆರವಣಿಗೆ ಮೂಲಕ ಬಂದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು "ಈ ರೀತಿ ಯುದ್ಧ ಗೆದ್ದು ಬಂದವರಂತೆ ಮೆರವಣಿಗೆ ಮೂಲಕ ಬಂದಿದ್ದನ್ನು ನಾನು ಖಂಡಿಸುತ್ತೇನೆ" ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಕೊರೊನಾ ಇಂದ ಗುಣಮುಖರಾಗಿ ಬಂದಿದ್ದು ನನಗೂ ಸಂತೋಷವಾಗಿತ್ತು, ಆದರೆ ಈ ರೀತಿ ಯುದ್ಧ ಗೆದ್ದು ಬಂದವರಂತೆ ಮೆರವಣಿಗೆ ಮೂಲಕ ಬಂದಿದ್ದನ್ನು ನಾನು ಖಂಡಿಸುತ್ತೇನೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ" ಎಂದು ಒತ್ತಾಯಿಸಿದ್ದಾರೆ.
"ರಾಜ್ಯಕ್ಕೆ ರಾಜ್ಯವೇ ಕೊರೊನಾ ಇಂದ ಕಂಗಾಲಾಗಿದೆ, ಇಂತಹ ಸಂದಿಗ್ಧ ಸಮಯದಲ್ಲಿ ಜನರನ್ನು ಗುಂಪುಗೂಡಿಸಿ ಮೆರವಣಿಗೆ ಮಾಡುವುದು ಬೇಜವಾಬ್ದಾರಿಯ ನಡವಳಿಕೆಯಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ತಿಳಿಹೇಳಬೇಕಾದವರೆ ಈ ರೀತಿ ವರ್ತಿಸಿದರೆ ಹೇಗೆ?" ಎಂದು ಪ್ರಶ್ನಿಸಿದ್ದಾರೆ