ಒಡಿಶಾ,ಜೂ 08 (Daijiworld News/MSP): ಒಡಿಶಾದ ಧೇಂಕ್ ನಲ್ ಜಿಲ್ಲೆಯಲ್ಲಿ ತರಬೇತಿ ವಿಮಾನ ಪತನವಾದ ಪರಿಣಾಮ ಇಬ್ಬರು ಪೈಲೆಟ್ ಗಳು ದುರ್ಮರಣಕ್ಕಿಡಾಗಿದ್ದಾರೆ. ಸೋಮವಾರ ಬೆಳಿಗ್ಗೆ ವಿಮಾನ ಅಪಘಾತಕ್ಕೀಡಾದ್ದು ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್ ಮತ್ತು ಬೋಧಕ ಪೈಲೆಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಜಿಲ್ಲೆಯ ಕಂಕದಾಹದ ಪೊಲೀಸ್ ಮಿತಿಯಲ್ಲಿರುವ ಬೀರಸಲದಲ್ಲಿರುವ ಸರ್ಕಾರಿ ವಾಯುಯಾನ ತರಬೇತಿ ಸಂಸ್ಥೆಯಲ್ಲಿ (ಜಿಎಟಿಐ) ತರಬೇತಿ ಪಡೆಯುತ್ತಿರುವಾಗ ಮೊದಲಿಗೆ ವಿಮಾನ ಟಾರ್ಮ್ಯಾಕ್ ಮೇಲೆ ಇಳಿಯಿತು.
ಬಳಿಕ ಏರ್ಸ್ಟ್ರಿಪ್ನಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ತರಬೇತಿ ಪಡೆಯುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ಬಿಹಾರ ಮತ್ತು ತಮಿಳುನಾಡು ಮೂಲದ ಪೈಲಟ್ ಗಳು ಮೃತಪಟ್ಟಿದ್ದಾರೆ.
ಪ್ರತಿಕೂಲ ಹವಾಮಾನ ಅಥವಾ ತರಬೇತಿ ವೇಳೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಿಮಾನ ಪತನವಾಗಿದೆ ಎಂದು ಶಂಕಿಸಲಾಗಿದ್ದರೂ, ನಿಖರ ಕಾರಣವನ್ನು ಇನ್ನಷ್ಟೇ ಗುರುತಿಸಬೇಕಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದಾರೆ.