ಮುಂಬೈ, ಜೂ.08 (DaijiworldNews/MB) : ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಮತ್ತು ಬಡವರಿಗೆ ಸಹಾಯ ಮಾಡಿದ್ದ ಬಾಲಿವುಡ್ ನಟ ಸೋನು ಸೂದ್ ಅವರನ್ನು ಶಿವಸೇನಾ ಸಂಸದ ಸಂಜಯ್ ರಾವತ್ ಟೀಕೆ ಮಾಡಿದ ಬೆನ್ನಿಗೆ ಸೋನು ಸೂದ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆದಿತ್ಯ ಠಾಕ್ರೆ, ಸಚಿವ ಅಸ್ಲಮ್ ಶೇಖ್ ಮತ್ತು ನನ್ನೊಂದಿಗೆ ಸೋನು ಸೂದ್ ಅವರು ಸಿಎಂ ಉದ್ಧವ್ ಠಾಕ್ರೆಯವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಒಂದಾಗಿ ಕೆಲಸ ಮಾಡಿದರೆ ಹೆಚ್ಚು ಜನರಿಗೆ ಸಹಾಯ ಮಾಡಬಹುದು. ಮಹಾರಾಷ್ಟ್ರ ಜನತೆಗೆ ನೆರವಾಗಲು ಇಂತಹ ಉತ್ತಮ ಹೃದಯವುಳ್ಳ ವ್ಯಕ್ತಿಯನ್ನು ಭೇಟಿ ಮಾಡಿರುವುದು ಒಳ್ಳೆಯದಾಯಿತು ಎಂದು ಹೇಳಿದ್ದಾರೆ.
ಇನ್ನು ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಿದ ಬಳಿಕ ಸಂಜಯ್ ರಾವತ್ ಹೇಳಿಕೆಯ ಕುರಿತಾಗಿ ಮಾತನಾಡಿದ ಸೋನು ಸೂದ್, ದೇಶದೆಲ್ಲೆಡೆ ಜನರು ನನ್ನ ಕೆಲಸಕ್ಕೆ ಬೆಂಬಲಿಸುತ್ತಿದ್ದಾರೆ. ಇದು ಒಂದು ಪಕ್ಷ ಹಾಗೂ ಒಬ್ಬರಿಗೆ ಮಾತ್ರ ಸಂಬಂಧಪಟ್ಟ ವಿಚಾರವಲ್ಲ. ನನ್ನ ಕೆಲಸಕ್ಕೆ ಬಿಜೆಪಿಯವರು ಕೂಡಾ ಪ್ರೊತ್ಸಾಹಿಸುತ್ತಿದ್ದಾರೆ. ನಾವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕು. ಇಲ್ಲಿ ಯಾವುದೇ ವ್ಯಕ್ತಿಯಾಗಲಿ, ಯಾವುದೇ ಪಕ್ಷವಾಗಲಿ ಮುಖ್ಯವಲ್ಲ ಎಂದು ಹೇಳಿದ್ದಾರೆ.
ಸಂಜಯ್ ರಾವತ್ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ, ಚೆನ್ನಾಗಿ ಹಣ ನೀಡಿದ ಪಕ್ಷದ ಪ್ರಚಾರವನ್ನು ಸೋನು ಸೂದ್ ಮಾಡುತ್ತಿದ್ದಾರೆ. ಸೋನು ಸೂದ್ ಅವರು ಭಾರತೀಯ ಜನತಾ ಪಕ್ಷದ ಸೂಚಯಂತೆ ವಲಸೆ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದು ಕೊರೊನಾ ವೈರಸ್ನ್ನು ನಿಯಂತ್ರಿಸುವಲ್ಲಿ ಹಾಗೂ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ತೋರಿಸಲು ಇದು ಬಿಜೆಪಿಯ ಕುತಂತ್ರವಿದು. ನಟರಾಗಿರುವ ಸೋನು ಸೂದ್ ಅವರಿಗೆ ಯಾರಾದರೂ ಬರೆದುಕೊಟ್ಟ ಸಂಭಾಷಣೆ ಹೇಳಿ ಹಣ ಗಳಿಸುವುದೇ ವೃತ್ತಿ. ಇಂತಹ ಅನೇಕ ಮಂದಿ ನಮ್ಮ ಸುತ್ತಮುತ್ತ ಇದ್ದಾರೆ ಎಂದು ಹೇಳಿದ್ದರು.
ಇನ್ನು ಈ ಬಗ್ಗೆ ಟ್ವೀಟ್ ಕೂಡಾ ಮಾಡಿದ್ದ ಸಂಜಯ್ ರಾವತ್, ಭಾನುವಾರ ಸೋನು ಸೂದ್ ಅವರು ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದಾಗ ತಮ್ಮ ಟ್ವೀಟ್ನ್ನು ಡಿಲೀಟ್ ಮಾಡಿದ್ದು ಕೊನೆಗೂ ಸೋನು ಸೂದ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ನಿವಾಸದ ವಿಳಾಸ ಪತ್ತೆಹಚ್ಚಿ ಅವರ ಮನೆಗೆ ಹೋಗಿದ್ದಾರೆ. ಜೈ ಮಹಾರಾಷ್ಟ್ರ ಎಂದು ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.